ಚಂಡಿಗಢ( ಪಂಜಾಬ್):ದೆಹಲಿ ಚಲೋದಲ್ಲಿ ರೈತರು ಪಾಲ್ಗೊಳದಂತೆ ತಡೆಯಲು ಪಂಜಾಬ್‌ನ ಅಂಬಾಲಾ - ಶಂಭು ಗಡಿಯ ಹೆದ್ದಾರಿಯಲ್ಲಿ ಹಾಕಿದ್ದ ತಡೆಗೋಡೆಯನ್ನು ರೈತರು ದ್ವಂಸ ಮಾಡಿ ಘಗ್ಗರ್ ನದಿಗೆ ಎಸೆದಿದ್ದಾರೆ. ತಡರಾತ್ರಿ ಟ್ರ್ಯಾಕ್ಟರ್ಗಳಲ್ಲಿ ಹೊರಟಿದ್ದ ರೈತರಿಗೆ ಅಂಬಾಲಾ - ಶಂಭು ಗಡಿಯಲ್ಲಿ ತಡೆಯಾಗಿತ್ತು. ಈ ವೇಳೆ, ಸ್ಥಳೀಯ ಗ್ರಾಮಸ್ಥರು ಹಾಗೂ ರೈತರು ಸೇರಿ ಸಿಮೆಂಟ್ ಬ್ಲಾಕ್‌ಗಳನ್ನು ನದಿಗೆ ಉರುಳಿಸಿದ್ದಾರೆ.
ಬಳಿಕ ಘಗ್ಗರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ದಾಟಿ ರೈತರು ಮುಂದೆ ಸಾಗಿದ್ದಾರೆ. ಆದರೆ, ಹರಿಯಾಣದ ಗಡಿಗೆ ಬರುವುದು ಇನ್ನು ಕಠಿಣ ಸವಾಲಾಗಿದೆ. ಹಲವು ದಿನಗಳಿಂದ ರೈತ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ 'ದೆಹಲಿ ಚಲೋ' ಹೋರಾಟ ಮುಂದುವರೆದಿದ್ದು, ಪಂಜಾಬ್‌ನ ಗಡಿಯಲ್ಲಿರುವ ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದರೆ, ರಸ್ತೆಗಳ ಮೇಲೆ ಕಬ್ಬಿಣದ ಮೊಳೆಗಳು ಮತ್ತು ಮುಳ್ಳುತಂತಿಗಳನ್ನು ಅಳವಡಿಸಲಾಗಿದೆ. ಇದರಿಂದ ರೈತರ ಟ್ರ್ಯಾಕ್ಟರ್ಗಳು ದೆಹಲಿಗೆ ಪ್ರವೇಶಿಸದಂತೆ ತಡೆ ಒಡ್ಡಲಾಗುತ್ತಿದೆ. ಈ ಮಧ್ಯೆ ದೆಹಲಿ ಚಲೋ ಬೆಂಬಲಿಸಿ ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಬರುತ್ತಿರುವ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.