ಕರ್ನಾಟಕ

karnataka

ETV Bharat / bharat

ನಕಲಿ ಕೋರ್ಟ್ ನಡೆಸಿ 5 ವರ್ಷದಿಂದ ತೀರ್ಪು ನೀಡುತ್ತಿದ್ದ ಖೊಟ್ಟಿ ಜಡ್ಜ್​! - AHMEDABAD FAKE COURT

ನ್ಯಾಯಾಲಯದಲ್ಲಿ ನಕಲಿ, ವಂಚನೆ ಪ್ರಕರಣಗಳು ವಿಚಾರಣೆಗೆ ಬರುತ್ತವೆ. ಆದರೆ, ಗುಜರಾತ್​​ನಲ್ಲಿ ಕೋರ್ಟನ್ನೇ ನಕಲು ಮಾಡಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ಗುಜರಾತ್​​ ನಕಲಿ ಕೋರ್ಟ್​
ಗುಜರಾತ್​​ ನಕಲಿ ಕೋರ್ಟ್​ ಪ್ರಕರಣ (ETV Bharat)

By ETV Bharat Karnataka Team

Published : Oct 22, 2024, 3:48 PM IST

Updated : Oct 22, 2024, 7:45 PM IST

ಅಹಮದಾಬಾದ್​(ಗುಜರಾತ್​):ನ್ಯಾಯಾಲಯ ವ್ಯವಸ್ಥೆಯನ್ನೇ ನಕಲು ಮಾಡಿದ ಆಘಾತಕಾರಿ ಘಟನೆ ಗುಜರಾತ್​ನಲ್ಲಿ ಬೆಳಕಿಗೆ ಬಂದಿದೆ. ನಕಲಿ ಕೋರ್ಟ್​ ಸ್ಥಾಪಿಸಿ ಪ್ರಕರಣಗಳ ತೀರ್ಪು ನೀಡುತ್ತಿದ್ದ ಖೊಟ್ಟಿ ನ್ಯಾಯಾಧೀಶನನ್ನು ಪೊಲೀಸರು ಬಂಧಿಸಿದ್ದಾರೆ.

ಮೋರಿಸ್​ ಸ್ಯಾಮ್ಯುಯೆಲ್​​ ನಕಲಿ ಟ್ರಿಬ್ಯೂನಲ್​ ಸ್ಥಾಪಿಸಿ ನ್ಯಾಯಾಧೀಶನಂತೆ ತೀರ್ಪು ನೀಡುತ್ತಿದ್ದ ಆರೋಪಿ. ಈತನನ್ನು ಪೊಲೀಸರು ಬಂಧಿಸಿ, ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಜೈಲಿಗಟ್ಟಿದ್ದಾರೆ.

ಘಟನೆಯ ಪೂರ್ಣ ವಿವರ:ಗಾಂಧಿನಗರ ನಿವಾಸಿಯಾಗಿರುವ ಮೋರಿಸ್​ ಸ್ಯಾಮ್ಯುಯೆಲ್​​ ಕಾನೂನು ಪದವೀಧರನಾಗಿದ್ದು, ತನ್ನ ಕಚೇರಿಯಲ್ಲಿ ನ್ಯಾಯಾಲಯದ ಮಾದರಿಯನ್ನು ರೂಪಿಸಿದ್ದ. ಇಲ್ಲಿ ತಾನೇ ಜಡ್ಜ್​ ಎಂದು ಬಿಂಬಿಸಿ ಹಲವು ಪ್ರಕರಣಗಳಿಗೆ ಆದೇಶವನ್ನೂ ಹೊರಡಡಿಸುತ್ತಿದ್ದ. ಹೀಗೆ ಕಳೆದ 5 ವರ್ಷಗಳಿಂದ ಆತ ನಕಲಿ ಕೋರ್ಟ್​ ನಡೆಸಿಕೊಂಡು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸೃಷ್ಟಿಸಿದ ನಕಲಿ ಕೋರ್ಟ್​ (ETV Bharat)

2019ರಲ್ಲಿ ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ನಕಲಿ ಜಡ್ಜ್​​ ಮೋರಿಸ್ ಸ್ಯಾಮ್ಯುಯೆಲ್ ಕಕ್ಷಿದಾರರೊಬ್ಬರ ಪರವಾಗಿ ತೀರ್ಪು ನೀಡಿ, ಭೂ ಕಂದಾಯ ದಾಖಲೆಗಳಲ್ಲಿ ಆ ಕಕ್ಷಿದಾರರ ಹೆಸರನ್ನು ಸೇರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದ. ಬಳಿಕ ಮತ್ತೊಬ್ಬ ವಕೀಲರ ಮೂಲಕ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಆದೇಶವನ್ನು ಜಾರಿಗೊಳಿಸುವಂತೆ ಕೋರಿದ್ದ.

ಸಿಟಿ ಸಿವಿಲ್​ ಕೋರ್ಟಲ್ಲಿ ಸತ್ಯ ಬಯಲು:ಸ್ಯಾಮ್ಯುಯೆಲ್​ ನೀಡಿದ ನಕಲಿ ಆದೇಶವನ್ನೂ ಅರ್ಜಿಗೆ ಲಗತ್ತಿಸಿದ್ದ. ಸಿಟಿ ಸಿವಿಲ್​ ಕೋರ್ಟ್​ನಲ್ಲಿ ನಕಲಿ ಆದೇಶದ ಸತ್ಯ ಬೆಳಕಿಗೆ ಬಂದಿದೆ. ಆರೋಪಿ ಸ್ಯಾಮ್ಯುಯೆಲ್​ ವಿರುದ್ಧ ಅಹಮದಾಬಾದ್ ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್ ಅವರು ಕಾರಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಪಾಸಣೆ ನಡೆಸಿದಾಗ ಕೋರ್ಟೂ ನಕಲಿ, ಅಲ್ಲಿನ ಜಡ್ಜ್​​ ಕೂಡ ಕೊಟ್ಟಿ ಎಂಬುದು ಗೊತ್ತಾಗಿದೆ.

ಆರೋಪಿ ಸ್ಯಾಮ್ಯುಯೆಲ್ ಮಧ್ಯವರ್ತಿಯಾಗಿ ವರ್ತಿಸಿ ವಿವಾದಿತ ಜಮೀನುಗಳಿಗೆ ಆದೇಶ ನೀಡಿದ್ದಾನೆ ಎಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಸ್ಯಾಮ್ಯುಯೆಲ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಥೇಟ್​ ಕೋರ್ಟನ್ನೇ ಸೃಷ್ಟಿಸಿದ್ದ ಆರೋಪಿ:ಆರೋಪಿ ಸ್ಯಾಮ್ಯುಯೆಲ್​ ಗಾಂಧಿನಗರದಲ್ಲಿರುವ ತನ್ನ ಕಚೇರಿಯಲ್ಲಿ ನಿಜವಾದ ನ್ಯಾಯಾಲಯವನ್ನೇ ಸೃಷ್ಟಿ ಮಾಡಿದ್ದ. ಜಡ್ಜ್​​ ಕೂರುವ ಜಾಗ, ಕಟಕಟೆ, ಜನರು ಕೂರಲು ಸ್ಥಳ ಎಲ್ಲವನ್ನೂ ಆತ ರೂಪಿಸಿದ್ದ. ಕಂಡವರು ಇದನ್ನು ಕೋರ್ಟ್​ ಎಂದು ಸಲೀಸಾಗಿ ನಂಬುತ್ತಿದ್ದರು. ಕಳೆದ ಐದು ವರ್ಷಗಳಿಂದ ಆರೋಪಿಯು ಈ ಕೊಟ್ಟಿ ಕೋರ್ಟನ್ನು ನಡೆಸಿಕೊಂಡು ಬಂದಿದ್ದಾನೆ. ನಗರದ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇರುವ ಭೂ ವಿವಾದ ಪ್ರಕರಣಗಳೇ ಈತನ ಟಾರ್ಗೆಟ್ ಆಗಿರುತ್ತಿತ್ತು. ಕೇಸ್​ನಲ್ಲಿ ಸಿಲುಕಿದ ಜನರನ್ನು ಪುಸಲಾಯಿಸಿ, ಪ್ರಕರಣ ಇತ್ಯರ್ಥಪಡಿಸುವುದಾಗಿ ಹಣ ಪಡೆದುಕೊಳ್ಳುತ್ತಿದ್ದ. ತನ್ನ ಕಚೇರಿಯಲ್ಲಿನ ನಕಲಿ ನ್ಯಾಯಾಲಯದಲ್ಲಿ ತನ್ನ ಕಕ್ಷಿದಾರರ ಪರವಾಗಿ ತೀರ್ಪು ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಪತಿಗೆ 'ಹಿಜ್ಡಾ' ಎಂದು ಮೂದಲಿಸುವುದು ಮಾನಸಿಕ ಕ್ರೌರ್ಯ: ಹೈಕೋರ್ಟ್​ ತೀರ್ಪು

Last Updated : Oct 22, 2024, 7:45 PM IST

ABOUT THE AUTHOR

...view details