ನವದೆಹಲಿ :ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆ ಚುಕ್ಕಾಣಿಯು ಮಹಿಳೆಯರ ಪಾಲಾಗಿದೆ. ಸಿಎಂ ಆಗಿ ಈಗಾಗಲೇ ಬಿಜೆಪಿಯ ರೇಖಾ ಗುಪ್ತಾ ಅವರು ಪದಗ್ರಹಣ ಮಾಡಿದ್ದಾರೆ. ಇದೀಗ, ವಿರೋಧ ಪಕ್ಷದ ನಾಯಕಿಯಾಗಿ ಆಮ್ ಆದ್ಮಿ ಪಕ್ಷದ (ಆಪ್) ಅತಿಶಿ ಅವರು ಆಯ್ಕೆಯಾಗಿದ್ದಾರೆ.
ಭಾನುವಾರ ಇಲ್ಲಿ ನಡೆದ ಆಪ್ ಶಾಸಕಾಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಅತಿಶಿ ಅವರನ್ನು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ 22 ಶಾಸಕರು ಭಾಗವಹಿಸಿದ್ದರು.
ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಪ್ನ ಹಿರಿಯ ನಾಯಕ ಗೋಪಾಲ್ ರೈ, "ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅತಿಶಿ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪಕ್ಷಕ್ಕೆ ಇದು ಸವಾಲಿನ ಸಮಯ. ಅತಿಶಿ ಅವರು ದೆಹಲಿಯ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ, ವಿಪಕ್ಷ ನಾಯಕಿಯಾಗಿ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನೂತನ ವಿಪಕ್ಷ ನಾಯಕಿ ಅತಿಶಿ, "ಆಡಳಿತಾರೂಢ ಬಿಜೆಪಿಯು ನೀಡಿದ ಭರವಸೆಗಳನ್ನು ಈಡೇರಿಸುವಂತೆ ಸಮರ್ಥ ವಿಪಕ್ಷವಾಗಿ ಆಪ್ ಕೆಲಸ ಮಾಡಲಿದೆ. ಮಹಿಳೆಯರಿಗೆ ಮಾಸಿಕ 2500 ರೂ.ಗಳ ನೆರವು ನೀಡುವ ಯೋಜನೆಯನ್ನು ಜಾರಿಗೆ ತರುವ ನಿರ್ಧಾರವನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮೊದಲ ಸಂಪುಟ ಸಭೆಯಲ್ಲಿ ಅಂಗೀಕರಿಸಿಲ್ಲ" ಎಂದರು.