ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಸಪ್ತ ಗ್ಯಾರಂಟಿಗಳನ್ನು ಎಎಪಿ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಆರ್ಥಿಕ ದುರ್ಬಲ ವರ್ಗದವರಿಗೆ (EWS) ಫ್ಲಾಟ್, ಸಂಸದರು, ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳ ನಿವಾಸದಲ್ಲಿ ಕಾರ್ಯ ನಿರ್ವಹಿಸುವ ಸೇವಕರ (ಮನೆಗೆಲಸದವರ) ಕೆಲಸದ ಗಂಟೆಗಳ ನಿಯಮ ಸೇರಿದಂತೆ ಹಲವು ಗ್ಯಾರಂಟಿಗಳನ್ನು ನೀಡಿದ್ದಾರೆ.
ಪೋರ್ಟಲ್ನಲ್ಲಿ ನೋಂದಣಿಯಾಗಿರುವ ಸೇವಕರಿಗೆ ವೇತನ ನಿಯಮಾವಳಿ, 10 ಲಕ್ಷ ವಿಮೆ ಮತ್ತು ಅವರ ಮಕ್ಕಳಿಗೆ ವಿಮೆ ಕೂಡ ಇದರಲ್ಲಿ ಸೇರಿದೆ.
ಈ ಕುರಿತು ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ಶೇ 70-80ರಷ್ಟು ಮನೆಗೆಲಸದ ಸೇವಕರಿಗೆ ವೇತನವನ್ನು ನೀಡಲಾಗುತ್ತಿಲ್ಲ. ಅವರಿಗೆ ಕೇವಲ ಕ್ವಾಟ್ರಸ್ ಮಾತ್ರ ನೀಡಲಾಗಿದ್ದು, ಜೀತ ಕಾರ್ಮಿಕರಂತೆ ಪರಿಗಣಿಸಲಾಗುತ್ತಿದೆ. ಈ ಮನೆಗೆಲಸದವರಿಗೆ ನೀಡುತ್ತಿರುವ ಮನೆಯನ್ನು ಕೆಲವು ಸಂಸದರು ಬಾಡಿಗೆಗೆ ನೀಡಿದ್ದಾರೆ ಎಂದು ಕೂಡ ಆರೋಪಿಸಿದರು.
ಮೊದಲಿಗೆ ನಾವು ಸೇವಕರು, ಹಾಗಾಗಿ ಹೆಸರು ನೋಂದಣಿಗೆ ಪ್ರತ್ಯೇಕ ಪೋರ್ಟಲ್ ಸೃಷ್ಟಿಸಲಾಗುವುದು. ಈ ಮೂಲಕ ಕೆಲಸಗಾರರು ಉದ್ಯೋಗದ ಅವಕಾಶವನ್ನು ಹುಡುಕಬಹುದು. ಎರಡನೇಯದು ಈ ಉದ್ಯೋಗಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು. ಮೂರನೇಯದು ಮೊಬೈಲ್ ಮೊಹಲ್ಲಾ ಕ್ಲಿನಿಕ್ ಅನ್ನು ನಿಯೋಜಿಸಲಾಗುವುದು ಎಂದು ಆಪ್ ನಾಯಕ ಭರವಸೆ ನೀಡಿದರು.