ಮೆಹ್ಸಾನಾ (ಗುಜರಾತ್):ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ನಂತರವೂ ನಕಾರಾತ್ಮಕವಾಗಿ ಬದುಕುತ್ತಿದೆ ಮತ್ತು ದ್ವೇಷದ ಹಾದಿಯನ್ನು ಬಿಡಲು ಸಿದ್ಧವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷವಾಗಿ ಕುಟುಕಿದ್ದಾರೆ. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವಾಲಿನಾಥ ಮಹಾದೇವ್ ದೇವಾಲಯ ಉದ್ಘಾಟನೆ ಮತ್ತು 8,350 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸ್ವತಂತ್ರ ಭಾರತದಲ್ಲಿ ದೀರ್ಘಕಾಲದಿಂದ ಕಾಂಗ್ರೆಸ್ ಅಭಿವೃದ್ಧಿ ಮತ್ತು ಪರಂಪರೆಯ ನಡುವೆ ಸಂಘರ್ಷ ಮತ್ತು ದ್ವೇಷವನ್ನು ಸೃಷ್ಟಿಸಿತ್ತು. ಇದಕ್ಕೆ ಯಾರನ್ನಾದರೂ ದೂಷಿಸುವುದಾದರೆ, ದೇಶವನ್ನು ದಶಕಗಳ ಕಾಲ ಆಳಿದ ಇದೇ ಕಾಂಗ್ರೆಸ್ಅನ್ನೇ ದೂಷಿಸಬೇಕು. ಸೋಮನಾಥ (ದೇಗುಲ)ದಂತಹ ಪುಣ್ಯ ಕ್ಷೇತ್ರವನ್ನೂ ವಿವಾದಕ್ಕೆ ಕಾರಣವಾಗಿಸಿದ್ದು ಕೂಡ ಇದೇ ಕಾಂಗ್ರೆಸ್ ಎಂದು ಮೋದಿ ದೂರಿದರು.
ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಪಾವಗಡ ದೇವಸ್ಥಾನದಲ್ಲಿ ಧಾರ್ಮಿಕ ಧ್ವಜಾರೋಹಣ ಮಾಡುವ ಇಚ್ಛೆಯನ್ನು ಕಾಂಗ್ರೆಸ್ ತೋರಲಿಲ್ಲ. ದಶಕಗಳಿಂದ ಮೊಧೇರಾದ ಸೂರ್ಯ ದೇವಾಲಯವನ್ನು ಮತ ಬ್ಯಾಂಕ್ ರಾಜಕೀಯದೊಂದಿಗೆ ಜೋಡಿಸಲಾಗಿತ್ತು. ಇಂದು ಭಗವಾನ್ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದಾಗ, ಇಡೀ ದೇಶವು ಈ ಬಗ್ಗೆ ಸಂತೋಷವಾಗಿದೆ. ಆದರೆ, ನಕಾರಾತ್ಮಕವಾಗಿ ಬದುಕುವ ಜನರು ದ್ವೇಷದ ಹಾದಿಯನ್ನು ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬನಸ್ಕಾಂತ ಜಿಲ್ಲೆಯ ದೀಸಾದಲ್ಲಿ ಏರ್ ಫೋರ್ಸ್ ಸ್ಟೇಷನ್ ರನ್‌ವೇ ಬಗ್ಗೆ ಅಂದಿನ ಮುಖ್ಯಮಂತ್ರಿಯಾಗಿ (ಗುಜರಾತ್‌ನ) ನಾನು ಹಲವಾರು ಪತ್ರಗಳನ್ನು ಬರೆದಿದ್ದೆ. ಇದಕ್ಕಾಗಿ ಸಾಕಷ್ಟು ಪ್ರಯತ್ನಿಸಿದೆ. ಆದರೆ, ಕೇಂದ್ರದ ಆಗಿನ ಕಾಂಗ್ರೆಸ್ ಸರ್ಕಾರವು ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸಿತು. ಈ ಸ್ಥಳವು ಭಾರತದ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ವಾಯುಪಡೆಯವರೂ ಹೇಳಿದರೂ ಕಾಂಗ್ರೆಸ್ ಸರ್ಕಾರ ಕೇಳಲಿಲ್ಲ. 2004ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರವು ಕಡತದ ಮೇಲೆ ಕುಳಿತಿತ್ತು. ಸುಮಾರು ಒಂದೂವರೆ ವರ್ಷಗಳ ಹಿಂದೆ ನಾನು ಈ ಯೋಜನೆಗೆ ಅಡಿಪಾಯ ಹಾಕಿದೆ. ಏಕೆಂದರೆ, ಈ ಮೋದಿ ನಿರ್ಧರಿಸಿದ್ದನ್ನು ಮಾಡಿಯೇ ಮಾಡುತ್ತಾರೆ ಎಂದು ವಿವರಿಸಿದರು.
ಇದೇ ವೇಳೆ, ಭಾರತದ ಪರಂಪರೆಯನ್ನು ವಿಶ್ವ ಪರಂಪರೆಯಾಗಿ ಸಂರಕ್ಷಿಸಿ ಅಭಿವೃದ್ಧಿಪಡಿಸುವುದು ತಮ್ಮ ಸರ್ಕಾರದ ಪ್ರಯತ್ನವಾಗಿದೆ. ಗುಜರಾತ್ ಭಾರತದ ಪ್ರಾಚೀನ ನಾಗರೀಕತೆಯ ಅನೇಕ ಸಂಕೇತಗಳನ್ನು ಹೊಂದಿದೆ. ಈ ಸಂಕೇತಗಳು ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೆ ಮುಂಬರುವ ಪೀಳಿಗೆಯನ್ನು ಅವರ ಬೇರುಗಳೊಂದಿಗೆ ಸಂಪರ್ಕಿಸಲು ಸಹ ಬಹಳ ಮುಖ್ಯವಾಗಿದೆ. ಕಳೆದ ತಿಂಗಳಷ್ಟೇ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ 2,800 ವರ್ಷಗಳ ಹಿಂದಿನ ನಾಗರಿಕತೆಯ ಕುರುಹುಗಳು ಪತ್ತೆಯಾಗಿವೆ ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ಒಂದೆಡೆ ದೇವಸ್ಥಾನಗಳು ನಿರ್ಮಾಣವಾಗುತ್ತಿದ್ದು, ಮತ್ತೊಂದೆಡೆ, ಕೋಟಿಗಟ್ಟಲೆ ಬಡವರಿಗೆ ಸರ್ಕಾರ ಪಕ್ಕಾ ಮನೆಗಳನ್ನು ನಿರ್ಮಿಸುತ್ತಿದೆ. ದೇವರ ಕೆಲಸವಾಗಲಿ, ದೇಶದ ಕೆಲಸವಾಗಲಿ ಎರಡೂ ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವ ಕಾಲವಿದು ಎಂದು ಪ್ರಧಾನಿ ಮೋದಿ ತಿಳಿಸಿದರು.
ಇದನ್ನೂ ಓದಿ:ಮೂರನೇ ಅವಧಿಗೂ ಮೋದಿ ಪ್ರಧಾನಿ ಆಗಲಿದ್ದಾರೆ: ರಾಜನಾಥ್ ಸಿಂಗ್