ಬೆಳಗಾವಿ: ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಒತ್ತಾಯಪೂರ್ವಕವಾಗಿ ಬಾಲಕಿ ಜೊತೆ ಮದುವೆ ಮಾಡಿಸಿರುವ ಅಮಾನವೀಯ ಘಟನೆ ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತವರು ಬೆಳಗಾವಿಯಲ್ಲಿ ನಡೆದಿದೆ.
50 ಸಾವಿರ ರೂ. ಸಾಲ ಪಡೆದಿದ್ದ ಬಾಲಕಿಯ ತಾಯಿ ಮರು ಪಾವತಿ ಮಾಡಿಲ್ಲ ಎಂದು ಬಲವಂತವಾಗಿ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಲಾಗಿದೆ. ಮದುವೆ ಮಾಡಿಕೊಂಡ ಯುವಕ, ಯುವಕನ ತಾಯಿ, ತಂದೆ, ಸಹೋದರನ ವಿರುದ್ಧ ಬಾಲಕಿ ನೀಡಿದ ದೂರಿನ ಮೇರೆಗೆ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಗ್ರಾಮವೊಂದರ ಬಾಲಕಿ ಬೆಳಗಾವಿಯ ಅನಗೋಳದಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಬಾಲಕಿ ಚಿಕ್ಕಪ್ಪ, ತಾಯಿ ಜೊತೆ ವಾಸವಾಗಿದ್ದಳು. ಬಾಲಕಿಗೆ ಅನಾರೋಗ್ಯ ಹಾಗೂ ಬಾಲಕಿ ಅತ್ತಿಗೆಯ ಹೆರಿಗೆ ಚಿಕಿತ್ಸೆಗಾಗಿ ಬಾಲಕಿ ತಾಯಿ ಸಾಲ ಪಡೆದಿದ್ದರು. ಆರೋಪಿಗಳ ಬಳಿ ಕಿವಿ ಓಲೆ ಒತ್ತೆಯಿಟ್ಟು 50 ಸಾವಿರ ರೂಪಾಯಿ ಸಾಲ ಪಡೆದಿದ್ದರು.
ಬಾಲಕಿಯ ತಾಯಿ ಈ ಹಣ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಮಗಳ ಮದುವೆ ಮಾಡಿಕೊಡುವಂತೆ ಆರೋಪಿ ಪಟ್ಟು ಹಿಡಿದಿದ್ದ. ಆದರೆ, ಇದಕ್ಕೆ ಬಾಲಕಿ ತಾಯಿ ಒಪ್ಪಿರಲಿಲ್ಲ. ಅಲ್ಲದೇ ನಾನು ಶಾಲೆ ಕಲಿಯುತ್ತೇನೆ. ಮದುವೆ ಆಗುವುದಿಲ್ಲ ಎಂದು ಹೇಳಿದ್ದಳು. 2024ರ ಸೆಪ್ಟೆಂಬರ್ 18ರಂದು ಬಾಲಕಿಯನ್ನು ಆಟೋದಲ್ಲಿ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿ, ಮಾರನೇ ದಿನ ಸೆಪ್ಟೆಂಬರ್ 19ರಂದು ಬೆಳಗ್ಗೆ ಯುವಕನ ಜೊತೆಗೆ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಮದುವೆ ಬಳಿಕ ಬಾಲಕಿಗೆ ನಿರಂತರ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಅಲ್ಲದೇ ಬಲವಂತವಾಗಿ ಪತಿ ದೈಹಿಕ ಸಂಪರ್ಕ ಮಾಡಿದ್ದಾನೆಂದು ಬಾಲಕಿ ಆರೋಪಿಸಿ ದೂರು ನೀಡಿದ್ದಾಳೆ. ಬಾಲಕಿ ನೀಡಿದ ದೂರಿನ ಮೇರೆಗೆ ಟಿಳಕವಾಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು: ಈಟಿವಿ ಭಾರತ ಪ್ರತಿನಿಧಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಸಂಪರ್ಕಿಸಿದಾಗ, "ಒತ್ತಾಯದ ಮದುವೆ ಕುರಿತು ಬಾಲಕಿ ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವಕ ಮತ್ತು ಅವರ ತಾಯಿ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ: ಪ್ರೀತಿ ಹೆಸರಲ್ಲಿ ಹಣದಾಸೆ ತೋರಿಸಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ - ಆರೋಪಿ ಬಂಧನ