ಮಲ್ಕಾನ್‌ಗಿರಿ (ಒಡಿಶಾ): ಒಡಿಶಾ-ಛತ್ತೀಸ್‌ಗಢ ಗಡಿ ಬಳಿಯ ಮಲ್ಕಾನ್‌ಗಿರಿ ಎಂವಿ-79 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ಮುಂದುವರೆದಿದೆ. ಈ ವೇಳೆ ಒಬ್ಬ ನಕ್ಸಲೇಟ್ ಸಾವನ್ನಪ್ಪಿದ್ದು, ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಸಿಬ್ಬಂದಿಯನ್ನ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಇನ್ನೂ ಕಾಡಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ.
ಛತ್ತೀಸ್‌ಗಢದಿಂದ ಒಡಿಶಾಗೆ ಪ್ರವೇಶಿಸಿದ ನಕ್ಸಲರು ; ಪ್ರಾಥಮಿಕ ಮಾಹಿತಿ ಪ್ರಕಾರ, ಛತ್ತೀಸ್‌ಗಢದಿಂದ ಮಲ್ಕನಗಿರಿ ಅರಣ್ಯಕ್ಕೆ ಕೆಲವು ನಕ್ಸಲರು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಎಂವಿ-79 ಪೊಲೀಸ್ ಠಾಣೆ ವ್ಯಾಪ್ತಿಯ ಜಿನೆಲ್‌ಗುಡ ಗ್ರಾಮದ ಬಳಿ ಅವರು ಬೀಡು ಬಿಟ್ಟಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ನಿನ್ನೆ (ಬುಧವಾರ) ಮಧ್ಯಾಹ್ನದಿಂದ ಸಮೀಪದ ಅರಣ್ಯದಲ್ಲಿ ‘ಎಸ್ಒಜಿ’ ಹಾಗೂ ‘ಡಿವಿಎಫ್’ ಜಂಟಿ ಕಾರ್ಯಾಚರಣೆ ಆರಂಭಿಸಿದೆ. ಕೂಂಬಿಂಗ್ ವೇಳೆ ಗುಂಡಿನ ದಾಳಿ ಪ್ರಾರಂಭವಾಗಿದೆ. ಈ ವೇಳೆ 'ಡಿವಿಎಫ್' ಜವಾನನಿಗೆ ಗುಂಡು ತಾಗಿದೆ. ನಂತರ ಸಿಬ್ಬಂದಿಯನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.