ಮಲಪ್ಪುರಂ(ಕೇರಳ):ಇಲ್ಲಿ ನಡೆದ ಪುತಿಯಂಗಡಿ 'ನೆರ್ಚಾ' ಎಂಬ ಧಾರ್ಮಿಕ ಕಾರ್ಯಕ್ರಮದ ವೇಳೆ ಆನೆಯೊಂದು ದಾಳಿ ಮಾಡಿದ್ದರಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಐದು ಆನೆಗಳು ಭಾಗಿಯಾಗಿದ್ದವು. ಈ ಪೈಕಿ ಪಾಕತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ, ಸೊಂಡಿಲಿನಿಂದ ಎಳೆದು ಬಿಸಾಡಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಗಾಬರಿಗೊಂಡ ಜನರು ಓಡಲು ಪ್ರಾರಂಭಿಸಿದ್ದಾರೆ. ಇದರಿಂದ ಕಾಲ್ತುಳಿತವಾಗಿ 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.