ಧನ್ಬಾದ್ (ಜಾರ್ಖಂಡ್) :ಜಾರ್ಖಂಡ್ ವಿಧಾನಸಭೆ ಚುನಾವಣೆ ಮುಗಿದು 9 ದಿನ ಕಳೆದಿದೆ. ಇಂದು (ನವೆಂವರ್ 28) ಸಿಎಂ ಆಗಿ ಹೇಮಂತ್ ಸೊರೆನ್ ಅವರು ಪ್ರಮಾಣ ವಚನ ಸ್ವೀಕಾರ ಕೂಡ ಮಾಡಲಿದ್ದಾರೆ. ಆದರೆ, ಚುನಾವಣೆ ಕರ್ತವ್ಯಕ್ಕೆ ನಿಯೋಜಿತವಾಗಿದ್ದ ತ್ರಿಪುರಾ ರೈಫಲ್ ದಳದ 80 ಯೋಧರಿಗೆ ಇನ್ನೂ ಕೆಲಸದಿಂದ ಮುಕ್ತಿ ಸಿಕ್ಕಿಲ್ಲ.
ನಿಜ, ಚುನಾವಣೆ ಬಂದೋಬಸ್ತ್ಗೆ ಹಾಕಲಾಗಿದ್ದ 80 ಯೋಧರು ಜಾರ್ಖಂಡ್ನಲ್ಲಿಯೇ ಉಳಿದಿದ್ದಾರೆ. ಇನ್ನೂ ಅವರಿಗೆ ತಮ್ಮ ಕೇಂದ್ರ ಸ್ಥಾನಕ್ಕೆ ತೆರಳಲು ಆದೇಶ ಸಿಕ್ಕಿಲ್ಲ. ಹೀಗಾಗಿ ಎಲ್ಲರೂ, ಇಲ್ಲಿನ ಸರ್ಕಾರ ಶಾಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಇದರಿಂದ ಶಾಲಾ ಮಕ್ಕಳ ಶಿಕ್ಷಣಕ್ಕೂ ಅಡ್ಡಿಯುಂಟಾಗಿದೆ.
ತ್ರಿಪುರಾ ರೈಫಲ್‌ನ 80 ಯೋಧರನ್ನು ಧನಬಾದ್ನ ಪ್ರೌಢಶಾಲೆಯಲ್ಲಿ ಉಳಿಸಲಾಗಿದೆ. ಐದು ವಾಹನಗಳು ಶಾಲೆಯ ಆವರಣದಲ್ಲಿ ನಿಂತಿವೆ. ಚುನಾವಣಾ ಕರ್ತವ್ಯ ಮುಗಿದಿದ್ದರೂ ಅವರನ್ನು ಕೆಲಸದಿಂದ ವಿಮುಕ್ತಿ ಮಾಡಲಾಗಿಲ್ಲ. ಇದರಿಂದ ಅವರು ಕುಟುಂಬಸ್ಥರನ್ನೂ ಭೇಟಿ ಮಾಡಲು ಸಾಧ್ಯವಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಸಬೂಬು ನೀಡುತ್ತಿರುವ ಅಧಿಕಾರಿಗಳು:ಶಾಲೆಯಲ್ಲಿ ಸಿಲುಕಿರುವ ಯೋಧರಿಗೆ ಸೂಕ್ತ ವಸತಿ ವ್ಯವಸ್ಥೆಯೂ ಇಲ್ಲವಾಗಿದೆ. ಊಟಕ್ಕೂ ಪರದಾಡುವಂತಾಗಿದೆ. ನಿಗದಿತ ದಿನ ಮುಗಿದ ಕಾರಣ ಅಧಿಕಾರಿಗಳು ವ್ಯವಸ್ಥೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರೇ, ಸ್ವತಃ ಖರ್ಚಿನಲ್ಲಿ ದಿನ ದೂಡುವಂತಾಗಿದೆ.
ತ್ರಿಪುರಾ ರೈಫಲ್ಸ್ ದಳದ ಕೇಂದ್ರ ಕಚೇರಿಯು ಛತ್ತೀಸ್ಗಢದಲ್ಲಿದೆ. ಚುನಾವಣಾ ಕರ್ತವ್ಯ ಮುಗಿದ ಬಳಿಕ ಎಲ್ಲ ಸಿಬ್ಬಂದಿ ಕೇಂದ್ರ ಸ್ಥಾನಕ್ಕೆ ತೆರಳಿ ವರದಿ ಸಲ್ಲಿಸಬೇಕು. ಆದರೆ, ತೆರಳಲು ಆದೇಶ ಸಿಕ್ಕಿಲ್ಲ. ಇತ್ತ ವಾಹನಗಳಿಗೆ ಡೀಸೆಲ್ ತುಂಬಿಸಲು ಹಣವೂ ಇಲ್ಲದೆ, ಶಾಲೆಯಲ್ಲಿ ಅವುಗಳನ್ನು ನಿಲ್ಲಿಸಲಾಗಿದೆ. ಯೋಧರು ತೆರಳಲು ರೈಲು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.