ಮುಂಬೈ (ಮಹಾರಾಷ್ಟ್ರ): ಮುಂಗಾರು ಅಧಿವೇಶನದಲ್ಲಿ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ಮಹತ್ವದ ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್’ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಗೆ ರಾಜ್ಯದೆಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಳ್ಳಿಗಳಲ್ಲಿ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಮಹಿಳೆಯರು ಮುಗಿಬೀಳುತ್ತಿರುವುದು ಕಂಡು ಬರುತ್ತಿದೆ. ರಾಜ್ಯಾದ್ಯಂತ ಈ ಯೋಜನೆ ತೀವ್ರ ಚರ್ಚೆಯಾಗುತ್ತಿರುವಾಗಲೇ ಇದೀಗ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗಾಗಿ ‘ಲಡ್ಕಾ ಭಾವೂ’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪಂಢರಪುರದಲ್ಲಿ ಘೋಷಿಸಿದ್ದಾರೆ.
ಹಣ ಎಲ್ಲಿಂದ ತರುವುದು?: ಒಂದೆಡೆ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದ್ದು, ಈ ಯೋಜನೆಗೆ ಸರ್ಕಾರ ಹಣ ಎಲ್ಲಿಂದ ತರುತ್ತದೆ? ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಈ ಯೋಜನೆ ಬಗ್ಗೆ ಸದನದಲ್ಲಿ ತೀವ್ರ ಗದ್ದಲ ಉಂಟಾಗಿದೆ. ಈಗ ಸರ್ಕಾರ ಲಡ್ಕಾ ಭಾವೂ( ಪ್ರೀತಿಯ ಅಣ್ಣ) ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗೆ ಯಾರು ಹಣ ಪಡೆಯುತ್ತಾರೆ?, ಅದಕ್ಕೆ ಹಣ ಎಲ್ಲಿಂದ ತರುತ್ತೀರಿ ಎಂಬುದರ ಬಗ್ಗೆ ಸರಕಾರ ಹೇಳಲಿ ಎಂದು ಪ್ರತಿಪಕ್ಷಗಳು ಪ್ರಶ್ನೆ ಎತ್ತಿವೆ.
ಬೊಕ್ಕಸಕ್ಕೆ ಹೆಚ್ಚುವರಿ ಹೊರೆ:ಈ ಯೋಜನೆಯು ಶಿಷ್ಯವೃತ್ತಿಯಲ್ಲಿರುವ ಮಕ್ಕಳಿಗೆ ಅನ್ವಯಿಸುತ್ತದೆ. ಈಗಾಗಲೇ ಮುಖ್ಯಮಂತ್ರಿಗಳ ಲಡ್ಕಿ ಬಹಿನ್ ಯೋಜನೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 46,000 ಸಾವಿರ ಕೋಟಿ ಹೆಚ್ಚುವರಿ ಹೊರೆಯಾಗುತ್ತಿದೆ. ಮತ್ತೊಂದೆಡೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಲಡ್ಕಾ ಭಾವೂ ಯೋಜನೆಗೆ ವರ್ಷಕ್ಕೆ 10,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹೊರೆ ಬೀಳಲಿದೆ ಎಂದು ಹೇಳಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್’ ಯೋಜನೆಗೆ 46,000 ಸಾವಿರ ಕೋಟಿ ವೆಚ್ಚವಾಗಿದ್ದರೂ, ರಾಜ್ಯ ಸರ್ಕಾರವು ಇದುವರೆಗೆ ಕೇವಲ 25,000 ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಮಂಜೂರು ಮಾಡಿದೆ. ಯೋಜನೆಯಲ್ಲಿ 18 ರಿಂದ 35 ವರ್ಷ ವಯಸ್ಸಿನ ವಿದ್ಯಾರ್ಥಿಗಳ ಅಂಕಿ- ಅಂಶಗಳನ್ನು ಬಹಿರಂಗಪಡಿಸಲಾಗಿಲ್ಲ. ಈ ಅಂಕಿ - ಅಂಶಗಳು ಹೊರಬಿದ್ದಲ್ಲಿ 10 ಸಾವಿರ ಕೋಟಿಗೂ ಅಧಿಕ ಹೊರೆ ಅಥವಾ ಹೆಚ್ಚುವರಿ ವೆಚ್ಚ ಆಗಬಹುದು ಎಂದು ಆರ್ಥಿಕ ತಜ್ಞ ವಿಶ್ವಾಸ್ ಉತ್ಗಿ ‘ಈಟಿವಿ ಭಾರತ್’ ಜೊತೆ ಮಾತನಾಡುತ್ತ ಹೇಳಿದ್ದಾರೆ. ಹಾಗಾಗಿ ಈ ಸರಕಾರ ಕೇವಲ ಮತಕ್ಕಾಗಿ ಘೋಷಣೆಗಳನ್ನು ಮಾಡಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.