ರಾಂಚಿ (ಜಾರ್ಖಂಡ್) :ಮುಖ್ಯಮಂತ್ರಿ ಹೇಮಂತ್ ಸೊರೇನ್ ದೆಹಲಿ ಪ್ರವಾಸದಲ್ಲಿದ್ದಾರೆ. ಏತನ್ಮಧ್ಯೆ, ಇಂದು ಇಡಿ ತಂಡ ದೆಹಲಿಯಲ್ಲಿರುವ ಅವರ ನಿವಾಸಕ್ಕೆ ತೆರಳಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 29 ಮತ್ತು 31ರ ನಡುವೆ ವಿಚಾರಣೆಗೆ ಹಾಜರಾಗುವಂತೆ ಇಡಿ ಕಳೆದ ವಾರವೇ ಹೊಸ ಸಮನ್ಸ್ ಜಾರಿ ಮಾಡಿತ್ತು.
ಜನವರಿ 27 ರಂದು ಸಿಎಂ ಹೇಮಂತ್ ಸೊರೇನ್ ರಾತ್ರಿ 8:00 ಗಂಟೆಗೆ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ್ದಾರೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಜಾರ್ಖಂಡ್ ಪೊಲೀಸರಿಗೆ ಜಾಗರೂಕರಾಗಿರಲು ತಿಳಿಸಲಾಗಿದೆ. ಆದರೆ ವಿಚಾರಣೆಗೆ ಸಿಎಂ ಹಾಜರಾದರಾ ಇಲ್ಲವೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಅವರು ಇಡಿ ಅಧಿಕಾರಿಗಳಿಗೆ ಅನ್ ರೀಚೇಬಲ್ ಆಗಿದ್ದಾರೆ ಎನ್ನಲಾಗಿದೆ.
ಇಡಿಗೆ ಹೇಮಂತ್ ಸೊರೇನ್ ಕಚೇರಿಯಿಂದ ಪತ್ರ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ಕಚೇರಿಯಿಂದ ಇಡಿಗೆ ಮೇಲ್ ಕಳುಹಿಸಲಾಗಿದೆ. ಅದರಲ್ಲಿ ಹೇಮಂತ್ ಸೊರೆನ್ ಜನವರಿ 31 ರಂದು ಇಡಿ ಕಚೇರಿಗೆ ಹಾಜರಾಗಲಿದ್ದಾರೆ ಎಂದು ತಿಳಿಸಲಾಗಿದೆ ಎಂದು ವರದಿಯಾಗಿದೆ.
ಇಡಿ ಮುಂದೆ ಲಾಲು ಪ್ರಸಾದ್ ಯಾದವ್ ಹಾಜರು:ಮತ್ತೊಂದು ಕಡೆ ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಕುರಿತು ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಒಂದರ ಹಿಂದೆ ಒಂದರಂತೆ ಐದು ಪೋಸ್ಟ್‌ಗಳನ್ನು ಮಾಡಿದ್ದಾರೆ. ಇಡಿ ವಿಚಾರಣೆ ವಿರುದ್ಧ ಹರಿಹಾಯ್ದಿದ್ದಾರೆ. ಇಂದು ತಂದೆಗೆ ಏನಾದರೂ ಆದರೆ, ಸಿಬಿಐ-ಇಡಿ ಜೊತೆಗೆ ಗೋಸುಂಬೆ ಮತ್ತು ಅದರ ಮಾಲೀಕರು ಅದಕ್ಕೆ ಹೊಣೆಯಾಗುತ್ತಾರೆ ಎಂದು ಸಿಎಂ ನಿತೀಶ್ ಅವರ ಹೆಸರನ್ನು ಹೇಳದೆ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.