ರಾಯ್‌ಪುರ(ಛತ್ತೀಸ್‌ಗಢ): ಪಡ್ಡೆ ಹುಡುಗರ ಮನಸು ಕದ್ದ ಚೆಲುವೆ, ನಟಿ ಸನ್ನಿ ಲಿಯೋನ್ ಅವರ ಹೆಸರಿನಲ್ಲಿ ಛತ್ತೀಸ್‌ಗಢ ಸರ್ಕಾರದ 'ಮಹಿಳಾ ವಂದನಾ ಯೋಜನೆ'ಯಡಿ ಮಾಸಿಕವಾಗಿ ನೀಡಲಾಗುವ 1 ಸಾವಿರ ರೂಪಾಯಿ ಹಣವನ್ನು ಅಕ್ರಮವಾಗಿ ಪಡೆದುಕೊಳ್ಳುತ್ತಿರುವ ಪ್ರಕರಣ ಬಯಲಾಗಿದೆ.
ಈ ಅಕ್ರಮವನ್ನು ಕಾಂಗ್ರೆಸ್ ಬಯಲಿಗೆ ತಂದಿದ್ದು, ಈ ಬಗ್ಗೆ ತನಿಖೆಗೆ ಆಗ್ರಹಿಸಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಜೈವರ್ಧನ್ ಬಾಘೆಲ್ ಅವರು ಭಾನುವಾರ ತಮ್ಮ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಮಹಿಳೆಯರಿಗಾಗಿ ಇರುವ ಮಹತರಿ ವಂದನಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ. ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಖಾತೆ ತೆರೆದು ಹಣ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಛತ್ತೀಸ್‌ಗಢ ಸರ್ಕಾರವು ಪ್ರತಿ ತಿಂಗಳು ಸನ್ನಿ ಲಿಯೋನ್‌ಗೆ 1,000 ರೂಪಾಯಿಗಳನ್ನು ನೀಡುತ್ತಿದೆ. ಈ ಪ್ರಕರಣವು ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತದೆ ಎಂದು ದೂರಿದ್ದಾರೆ. ಜೊತೆಗೆ, ಸನ್ನಿ ಲಿಯೋನ್ ಹೆಸರಿನ ಖಾತೆ ಮತ್ತು ಅದಕ್ಕೆ ಪ್ರತಿ ತಿಂಗಳು ವರ್ಗಾವಣೆಯಾದ ಮೊತ್ತವುಳ್ಳ ದಾಖಲೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಬಿಜೆಪಿ ಮೇಲೆ ಕಾಂಗ್ರೆಸ್ ವಾಗ್ದಾಳಿ: ಪ್ರಕರಣ ಹೊರಬಿದ್ದ ಬಳಿಕ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಮಹತರಿ ವಂದನಾ ಯೋಜನೆಯಲ್ಲಿ ಅಕ್ರಮ ನಡೆದಿದೆ. ಯೋಜನೆಯ 70 ಲಕ್ಷ ಹಣದ ಪೈಕಿ ಪೈಕಿ 50 ಲಕ್ಷಕ್ಕೂ ಹೆಚ್ಚು ಹಣ ಪೋಲಾಗಿದೆ. ಮೃತರಿಗೂ ಹಣ ನೀಡಲಾಗುತ್ತಿದೆ. ಸನ್ನಿ ಲಿಯೋನ್ ಹೆಸರಿನಲ್ಲೂ ಹಣ ಪಡೆದುಕೊಂಡಿರುವುದು ಇದಕ್ಕೆ ಸಾಕ್ಷಿ. ಈ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಕಾಂಗ್ರೆಸ್ ನೀಡಿದ ದಾಖಲೆಗಳ ಅನುಸಾರ ಸರ್ಕಾರ ತನಿಖೆ ನಡೆಸಿದ್ದು, ಬಸ್ತಾರ್ ಜಿಲ್ಲೆಯ ತಾಳೂಗು ಗ್ರಾಮದ ವ್ಯಕ್ತಿಯೊಬ್ಬರು ನಕಲಿ ದಾಖಲೆ ನೀಡಿ ಸನ್ನಿ ಲಿಯೋನ್ ಹೆಸರಿನಲ್ಲಿ ಹಣ ಪಡೆದುಕೊಂಡಿದ್ದನ್ನು ಪತ್ತೆ ಮಾಡಿದೆ. ತಕ್ಷಣವೇ ಆ ಖಾತೆಯನ್ನು ಮುಟ್ಟಗೋಲು ಹಾಕಿಕೊಂಡು, ಹಣ ಎತ್ತುವಳಿ ಮಾಡಲಾಗಿದೆ. ಸರ್ಕಾರಕ್ಕೆ ವಂಚಿಸಿದ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಅಕ್ರಮವಾಗಿ ಐಎಎಸ್ ಹುದ್ದೆ ಪಡೆದ ಪೂಜಾ ಖೇಡ್ಕರ್ಗೆ ನಿರೀಕ್ಷಣಾ ಜಾಮೀನಿಲ್ಲ; ಯಾವುದೇ ಕ್ಷಣದಲ್ಲೂ ಬಂಧನ ಸಾಧ್ಯತೆ