ಮುಂಬೈ, ಮಹಾರಾಷ್ಟ್ರ: ನವಿ ಮುಂಬೈನ ವಾಶಿ ಪ್ರದೇಶದಲ್ಲಿ ಭೀಕರ ಹಾಗೂ ವಿಚಿತ್ರವಾದ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 6 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಶನಿವಾರ ತಡರಾತ್ರಿ ಎಸ್‌ಯುವಿ ಅಪಘಾತಕ್ಕೀಡಾಗಿ ಮತ್ತೊಂದು ಕಾರಿನ ಬಾನೆಟ್‌ಗೆ ಬಿದ್ದಿದೆ. ಅಪರಿಚಿತ ಕಾರಣದಿಂದ ಎಸ್‌ಯುವಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ. ಅಪಘಾತದ ಸಮಯದಲ್ಲಿ ವಾಹನದ ಹಿಂಭಾಗವು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಮೃತ ಬಾಲಕನ ಕಾರಿನ ಬಾನೆಟ್ ಮೇಲೆ ಬಿದ್ದಿದೆ.
ಘಟನೆ ನಡೆದಿದ್ದು ಹೇಗೆ?: ರಾತ್ರಿ 11.45 ರ ಸುಮಾರಿಗೆ ವಾಶಿಯ ಜನನಿಬಿಡ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತಂದೆ-ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದ ಮಗುವಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಅದೃಷ್ಟವಶಾತ್, ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಹೆತ್ತವರು, ಕಾರಿನಲ್ಲಿದ್ದ ಏರ್ ಬ್ಯಾಗ್ ಗಳು ಓಪನ್ ಆಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡ ಪೊಲೀಸರು: ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ. ಎಸ್‌ಯುವಿ ಅಪಘಾತಕ್ಕೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ಭಾರಿ ವೇಗವೇ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ.
ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಿಷ್ಟು: ಮೃತ ಬಾಲಕನನ್ನು ಹರ್ಷ್ ಅರೆಥಿಯಾ ಎಂದು ಗುರುತಿಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಸ್‌ಯುವಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದೆ. ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಅದರ ಹಿಂಭಾಗವು ಗಾಳಿಯಲ್ಲಿ ಸುಮಾರು 7 ಅಡಿ ಎತ್ತರಕ್ಕೆ ಹಾರಿ, ಅದು ಮೃತ ಹರ್ಷ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದಿದೆ. ಎಸ್ ಯುವಿಯ ಹಿಂಭಾಗ ಮತ್ತೊಂದು ಕಾರಿನ ಬಾನೆಟ್ ಮೇಲೆ ಬಿದ್ದಿದ್ದರಿಂದ ಮುಂಭಾಗದಲ್ಲಿ ಕುಳಿತಿದ್ದ ಬಾಲಕ ತೀವ್ರವಾಗಿ ಗಾಯಗೊಳ್ಳುವಂತೆ ಮಾಡಿದೆ, ಪರಿಣಾಮ ಮಗ ಸಾವನ್ನಪ್ಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಾನ್ಸೋಲಿ ನಿವಾಸಿಯಾದ ಎಸ್‌ಯುವಿ ಚಾಲಕ ವಿನೋದ್ ಪಚಾಡೆ ವಿರುದ್ಧ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಸಾವಿಗೆ ಕಾರಣವಾದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ವಾಶಿ ಪೊಲೀಸ್ ಠಾಣೆ ಎಪಿಐ ದೀಪಕ್ ಗಾವಿತ್ ತಿಳಿಸಿದ್ದಾರೆ.
ಇದನ್ನು ಓದಿ: ಸಂಭಾಲ್‌ನಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆ: ಯಾತ್ರಾರ್ಥಿಗಳ ದಾಹ ತಣಿಸುತ್ತಿದ್ದ 'ತೀರ್ಥಗಂಗೆ'ಯ ಚರಿತ್ರೆ