ಬೆಳಗಾವಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನಕ್ಕೀಗ ಶತಮಾನೋತ್ಸವ ಸಂಭ್ರಮ. ಈ ಸುಸಂದರ್ಭವನ್ನು ಐತಿಹಾಸಿಕವನ್ನಾಗಿಸಲು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಇನ್ನೇನು ಅವಿಸ್ಮರಣೀಯಕ್ಕೆ ಕ್ಷಣಗಣನೆ ಶುರುವಾಗಿದೆ. ಆ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯ ಪ್ರಮುಖ ಬೀದಿಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಮಹನೀಯರ ವಿದ್ಯುತ್ ದೀಪಗಳ ಪ್ರತಿಕೃತಿಗಳು ಆಕರ್ಷಣೀಯವಾಗಿವೆ. ಮೈಸೂರು ದಸರಾ ದೃಶ್ಯ ವೈಭವ ನೆನಪಿಸುತ್ತಿದೆ.
ನಗರದ ಪ್ರಮುಖ ಸರ್ಕಲ್ಗಳಲ್ಲಿ ಕಣ್ಮನ ಸೆಳೆಯುತ್ತಿರುವ ಲೈಟಿಂಗ್: ಕೇಂದ್ರ ಬಸ್ ನಿಲ್ದಾಣದಿಂದ, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಅಂಬೇಡ್ಕರ್ ರಸ್ತೆ, ಶ್ರೀಕೃಷ್ಣದೇವರಾಯ ವೃತ್ತ, ಕೆಎಲ್ಇ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿವರೆಗೂ ಹಾಗೂ ಚನ್ನಮ್ಮ ವೃತ್ತದಿಂದ ಲಿಂಗರಾಜ ಕಾಲೇಜು ರಸ್ತೆ, ಸಂಭಾಜಿ ವೃತ್ತ, ಬಸವೇಶ್ವರ ವೃತ್ತ, ಕಾಂಗ್ರೆಸ್ ರಸ್ತೆ, ಉದ್ಯಮಬಾಗ್ ರಸ್ತೆಯಿಂದ ವಿಟಿಯುವರೆಗೆ, ಹಳೆ ಪಿ.ಬಿ.ರಸ್ತೆಯಿಂದ ಯಡಿಯೂರಪ್ಪ ಮಾರ್ಗ ಸೇರಿದಂತೆ ಪ್ರಮುಖ ರಸ್ತೆಗಳು, ಒಳ ರಸ್ತೆಗಳು ಸಂಜೆ ಆಗುತ್ತಿದ್ದಂತೆ ನೋಡುಗರನ್ನು ಕಣ್ಮನ ಸೆಳೆಯುತ್ತಿವೆ.
ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮಹಾಪುರುಷರು, ದೇವಾನುದೇವತೆಗಳು, ಐತಿಹಾಸಿಕ ಸ್ಮಾರಕಗಳು, ಮಂದಿರಗಳ ವಿದ್ಯುತ್ ಪ್ರತಿಕೃತಿಗಳು (ಇನ್ ಸೆಗ್ನಿಯಾ) ವಿದ್ಯುತ್ ದೀಪಗಳಲ್ಲಿ ಮೂಡಿದ್ದು ಆಕರ್ಷಣೀಯವಾಗಿದೆ. ಈ ದೀಪಾಲಂಕಾರದ ಬಗೆ ಬಗೆಯ ಬೆಳಕಿನ ಚಿತ್ತಾರಗಳನ್ನು ಕಣ್ತುಂಬಿಕೊಳ್ಳಲು ನಗರವಾಸಿಗಳು ಅಷ್ಟೇ ಅಲ್ಲದೇ ಜಿಲ್ಲೆಯ ತಾಲೂಕು , ಪಟ್ಟಣ, ಹಳ್ಳಿಗಳಿಂದಲೂ ಜನ ಕುಟುಂಬ ಸಮೇತರಾಗಿ ಆಗಮಿಸುತ್ತಿರುವುದು ವಿಶೇಷ.
ಸೆಲ್ಫಿಗಳಿಗೆ ಮುಗಿ ಬಿದ್ದ ಜನ: ಇನ್ನು ಬೃಹದಾಕಾರದ ಐತಿಹಾಸಿಕ ಸ್ಮಾರಕಗಳು, ಮಹಾಪುರುಷರ ದೀಪಾಲಂಕಾರದ ಪ್ರತಿಕೃತಿಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಒಂದೆಡೆಯಾದರೆ, ಈ ಬೆಳಕಿನ ಸೊಬಗು, ಸೌಂದರ್ಯವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದು ಸಂಭ್ರಮಿಸುತ್ತಿರುವುದು ಮತ್ತೊಂದೆಡೆ. ಅಲ್ಲದೇ ತಮ್ಮ ಕುಟುಂಬಸ್ಥರು, ಬಂಧು ಬಾಂಧವರಿಗೆ ವಿಡಿಯೋ ಕಾಲ್ ಮೂಲಕ ಈ ದೃಶ್ಯ ವೈಭವವನ್ನು ತೋರಿಸುತ್ತಿರುವುದು ಸಾಮಾನ್ಯ. ರಾಣಿ ಚನ್ನಮ್ಮ ವೃತ್ತದಲ್ಲಿ ಅಂತೂ ರಾತ್ರಿ ಆಗುತ್ತಿದ್ದಂತೆ ಜನರ ದಂಡೇ ಹರಿದು ಬರುತ್ತಿದೆ.
ಒಟ್ಟು 104 ಕಿ.ಮೀ ದೀಪಾಲಂಕಾರ: ಬೆಳಗಾವಿ ನಗರದ ಪ್ರಮುಖ ರಸ್ತೆಗಳು, ಒಳ ರಸ್ತೆಗಳು ಸೇರಿ ಒಟ್ಟು 104 ಕಿ.ಮೀ. ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ದೀಪಗಳ ಕಮಾನುಗಳಿಂದ ಕುಂದಾನಗರಿ ಬೀದಿಗಳು ಸಿಂಗಾರಗೊಂಡಿವೆ. 90 ವೃತ್ತಗಳನ್ನು ದೀಪಾಲಂಕೃತಗೊಳಿಸಲಾಗಿದ್ದು, ರಾಜಕಳೆ ಸೃಷ್ಟಿಯಾಗಿದೆ. 70 ಕಡೆ ವಿದ್ಯುತ್ ಪ್ರತಿಕೃತಿ ಮಾದರಿಗಳನ್ನು ಅಳವಡಿಸಲಾಗಿದೆ. ಅಧಿವೇಶನ ನಡೆದ ವೀರಸೌಧವೂ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.
2 ಲಕ್ಷ ಬಲ್ಬ್ ಬಳಕೆ: ಬೆಳಗಾವಿ ದೀಪಾಲಂಕಾರಕ್ಕೆ 9 ವ್ಯಾಟ್ಸ್ನ ಸುಮಾರು 2 ಲಕ್ಷ ಎಲ್ಇಡಿ ಬಲ್ಬ್ಗಳನ್ನು ಬಳಸಿರುವುದು ದಾಖಲೆಯೇ ಸರಿ. ಇನ್ನು ಚನ್ನಮ್ಮ ವೃತ್ತ, ಅಶೋಕ ವೃತ್ತ, ಹನುಮಾನನಗರ ವೃತ್ತಗಳ ಸುತ್ತ ನವಿಲು ಮತ್ತು ಎಲೆ ಡಿಸೈನ್ ಸೆಟ್ ಕಲರ್ಫುಲ್ ಆಗಿದ್ದು, ಪ್ರಮುಖ ರಸ್ತೆ ವಿಭಜಕಗಳಲ್ಲಿ ಕ್ರಿಯೆಟಿವಿಟಿವ್ ಲೈಟಿಂಗ್ಸ್ ಅಳವಡಿಸಲಾಗಿದೆ. ಇನ್ನು ದೀಪಾಲಂಕಾರದಲ್ಲಿ ಸ್ಟ್ರಿಂಗ್ ಸೆಟ್, ಸ್ಟ್ರಿಂಗ್ ಜೂಮ್ಸ್, ಪೆಸ್ಟಿಮ್ ಬಲ್ಬ್, ವೇವ್ಸ್ಗಳನ್ನು ಬಳಸಲಾಗಿದೆ.
ಕುಂದಾನಗರಿ ಗಾಂಧಿಮಯ: ಚರಕ ನೇಯುತ್ತಿರುವ ಗಾಂಧಿ, ನಿಂತಿರುವ ಗಾಂಧಿ, ಗಾಂಧಿ ದಂಡಿಯಾತ್ರೆ, ಗಾಂಧಿ ಭಾರತ ಸೇರಿ 10ಕ್ಕೂ ಅಧಿಕ ಬಾಪೂಜಿ ವಿದ್ಯುತ್ ಪ್ರತಿಕೃತಿಗಳು ಅದ್ಭುತವಾಗಿ ಮೂಡಿ ಬಂದಿವೆ. ಗಾಂಧೀಜಿ ಭಾವಚಿತ್ರಗಳು, 'ಗಾಂಧಿ ಭಾರತ' ಕಾರ್ಯಕ್ರಮ ಲಾಂಛನ ಸೇರಿ ಇಡೀ ಬೆಳಗಾವಿ ನಗರ ಗಾಂಧಿಮಯವಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲ ಬಾಪೂಜಿ ಚಿತ್ರಗಳೇ ಕಾಣಸಿಗುತ್ತಿವೆ.
ಲೈಟಿಂಗ್ ಇನ್ಸೆಗ್ನಿಯಾ ಆಕರ್ಷಣೆ: ಬುದ್ಧ, ಮಹಾವೀರ, ಬಸವೇಶ್ವರ, ಮಹರ್ಷಿ ವಾಲ್ಮೀಕಿ, ಶಿವಾಜಿ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ವಿಶ್ವೇಶ್ವರಯ್ಯ ಸೇರಿ ಮತ್ತಿತರ ಮಹಾಪುರುಷರು. ಹಂಪಿ ಕಲ್ಲಿನ ರಥ, ಶ್ರೀಕೃಷ್ಣ ರಥ, ಕೆಂಪು ಕೋಟೆ, ಮೈಸೂರು ಅರಮನೆ, ಸಂಸತ್ತು, ಇಂಡಿಯಾ ಗೇಟ್ ಐತಿಹಾಸಿಕ ಸ್ಮಾರಕಗಳು. ಚಾಮುಂಡೇಶ್ವರಿ, ದುರ್ಗಾದೇವಿ, ಯಲ್ಲಮ್ಮದೇವಿ, ಶ್ರೀಕೃಷ್ಣ, ವಿಷ್ಣು, ಶ್ರೀರಾಮ, ಪರಶುರಾಮ, ಬಾಲಕೃಷ್ಣ, ಸೇರಿ ಇನ್ನಿತರ ದೇವರು. ಪಂಚಗ್ಯಾರಂಟಿ ಯೋಜನೆ ಸೇರಿದಂತೆ ವಿದ್ಯುತ್ ದೀಪಗಳಲ್ಲಿ ಮೂಡಿರುವ ವಿವಿಧ ಬೃಹದಾಕಾರದ ಪ್ರತಿಕೃತಿಗಳು ಎಲ್ಲರನ್ನು ಸೆಳೆಯುತ್ತಿವೆ. 45 ಅಡಿ ಉದ್ದ, 100 ಅಡಿ ಅಗಲದ ಬೃಹದಾಕಾರದ ಪ್ರತಿಕೃತಿಗಳು ದೀಪಾಲಂಕಾರಕ್ಕೆ ಮೆರಗು ತಂದಿವೆ.
ಅದ್ಭುತ ಸಂದೇಶ: ಆಯಾ ಮಹಾಪುರುಷರ ವೃತ್ತಗಳಲ್ಲಿ ಅವರದೇ ಪ್ರತಿರೂಪಗಳು ಎಲ್ಲರನ್ನು ಸೆಳೆಯುತ್ತಿದ್ದರೆ, ಎಪಿಎಂಸಿ ಬಳಿ ಜೈಕಿಸಾನ್, ಶೌರ್ಯ ವೃತ್ತದಲ್ಲಿ ಜೈಜವಾನ್, ಎಸ್ ಜಿಬಿಐಟಿ ಬಳಿ ಜೈವಿಜ್ಞಾನ ಸಂದೇಶ ಸಾರುವ ಇನ್ ಸೆಗ್ನಿಯಾಗಳು ಜನರನ್ನು ಸೆಳೆಯುತ್ತಿವೆ. ಬೆಳಗಾವಿ ನಗರ ಪ್ರವೇಶಿಸುವ ಕೆಎಲ್ಇ ಬಳಿಯ ರಾಷ್ಟ್ರೀಯ ಹೆದ್ದಾರಿ, ಯಡಿಯೂರಪ್ಪ ಮಾರ್ಗ, ಗಾಂಧಿ ನಗರ, ವಿಟಿಯು ರಸ್ತೆಯಲ್ಲಿ ವಿದ್ಯುತ್ ದೀಪಗಳ ಕಮಾನುಗಳು, ಕಾಂಗ್ರೆಸ್ ರಸ್ತೆಯಲ್ಲಿ ವಿರೂಪಾಕ್ಷ ಗೋಪುರ, ಪ್ರಮುಖ ರಸ್ತೆಗಳಲ್ಲಿ ಸ್ವಾಗತ ಬ್ಯಾನರ್ ಕಮಾನ್ಗಳು ಶತಮಾನೋತ್ಸವಕ್ಕೆ ಜನರನ್ನು ಸ್ವಾಗತಿಸುತ್ತಿವೆ.
ಬೆಳಗಾವಿಯಲ್ಲಿ ಮೊದಲ ಅದ್ಧೂರಿ ದೀಪಾಲಂಕಾರ: ವಿಶ್ವವಿಖ್ಯಾತ ಮೈಸೂರು ದಸರಾ, ಮಲೆಮಹದೇಶ್ವರ ಜಾತ್ರೆ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಹಂಪಿ ಉತ್ಸವ, ಕಾರ್ಕಳ ಉತ್ಸವ, ಬೆಂಗಳೂರಿನ ಗಣೇಶ ಉತ್ಸವ ಸೇರಿ ರಾಜ್ಯದ ವಿವಿಧೆಡೆ ಪ್ರಮುಖ ಜಾತ್ರೆ, ಉತ್ಸವಗಳಲ್ಲಿ ದೀಪಾಲಂಕಾರ ಮಾಡಿರುವ ಬೆಂಗಳೂರಿನ ಜಯನಗರದ ಮೋಹನಕುಮಾರ ಸೌಂಡ್ ಆ್ಯಂಡ್ ಲೈಟಿಂಗ್ಸ್ ಸಂಸ್ಥೆ ಬೆಳಗಾವಿಯಲ್ಲಿ ಅದ್ಭುತವಾಗಿ ದೀಪಾಲಂಕಾರ ಮಾಡಿದ್ದಾರೆ. ಬೆಳಗಾವಿಗರು ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ದೊಡ್ಡಮಟ್ಟದ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಂಡಿರುವುದು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, "ಮೈಸೂರು ದಸರಾವನ್ನು ಮೀರಿಸುವಂತೆ ಬೆಳಗಾವಿ ಮಿಂಚುತ್ತಿದೆ. ಇಂಧನ ಮತ್ತು ಹೆಸ್ಕಾಂ ಇಲಾಖೆಯಿಂದ ಇದು ಸಾಧ್ಯವಾಗಿದೆ. ಲೈಟಿಂಗ್ ಇನ್ ಸೆಗ್ನಿಯಾಗಳು ವಿಶೇಷವಾಗಿವೆ. ಇನ್ನು ಐತಿಹಾಸಿಕ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದರು. ಅದರ ಶತಮಾನೋತ್ಸವಕ್ಕೆ ಇಷ್ಟೆಲ್ಲ ಅದ್ಧೂರಿ ದೀಪಾಲಂಕಾರ ಸೃಷ್ಟಿಸಲಾಗಿದೆ ಎಂಬುದನ್ನು ಜನರಿಗೆ ತಿಳಿಸಲು ತುಂಬಾ ಸಂತೋಷ ಆಗುತ್ತಿದೆ. ಈ ಬೆಳಕಿನ ವೈಭವವನ್ನು ಜಿಲ್ಲೆ ಸೇರಿ ಇಡೀ ರಾಜ್ಯದ ಜನ ಕಣ್ತುಂಬಿಕೊಳ್ಳಿ. ಜೊತೆಗೆ ಸ್ವಾತಂತ್ರ್ಯ ಸಂಗ್ರಾಮವನ್ನು ಮೆಲುಕು ಹಾಕುವಂತೆ" ಕೇಳಿಕೊಂಡರು.
ಲೈಟಿಂಗ್ಸ್ ಸಂಸ್ಥೆ ಮಾಲೀಕ ವಿ.ಮೋಹನ್ ಕುಮಾರ್ ಮಾತನಾಡಿ, "14 ತಂಡಗಳೊಂದಿಗೆ 200 ಕಾರ್ಮಿಕರು ಹಗಲು-ರಾತ್ರಿ ಎನ್ನದೇ ಕೆಲಸದಲ್ಲಿ ತೊಡಗಿದ್ದೇವೆ. ಗಾಂಧೀಜಿ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೆವು. ಈಗ ಅವರು ಅಧ್ಯಕ್ಷತೆ ವಹಿಸಿದ್ದ ಅಧಿವೇಶನದ ಶತಮಾನೋತ್ಸವದಲ್ಲಿ ನನಗೆ ಕೆಲಸ ಸಿಕ್ಕಿದ್ದಕ್ಕೆ ತುಂಬಾ ಸಂತೋಷ ಮತ್ತು ಹೆಮ್ಮೆ ಎನಿಸುತ್ತಿದೆ. ಜೀವನದಲ್ಲಿ ನನಗೆ ಇದಕ್ಕಿಂತ ದೊಡ್ಡ ಸಾಧನೆ ಬೇರೆ ಯಾವುದೂ ಇಲ್ಲ. ಡಿ.9ರಿಂದ ಲೈಟಿಂಗ್ ಅಳವಡಿಸಲಾಗಿದ್ದು, ಅಧಿವೇಶನ ಮುಗಿದ ಬಳಿಕ ಜ.1 ಹೊಸ ವರ್ಷದವರೆಗೂ ಮುಂದುವರಿಸುವಂತೆ ಹೇಳಿದ್ದಾರೆ. ಈ ಬಗ್ಗೆ ಹೆಸ್ಕಾಂ ಎಂಡಿ ಅವರ ಆದೇಶಕ್ಕೆ ಕಾಯುತ್ತಿದ್ದೇವೆ" ಎಂದರು.
ಮುನ್ನೆಚ್ಚರಿಕೆ ವಹಿಸಿದ್ದೇವೆ: "ಎಲ್ಲ ಕಡೆ ಎಂಸಿಬಿ ಕಂಟ್ರೋಲ್, ಮೀಟರ್ ರೀಡಿಂಗ್ ಅಳವಡಿಸಿದ್ದೇವೆ. ಎಲ್ಲಿಯೂ ನೇರವಾಗಿ ವಿದ್ಯುತ್ ಸಂಪರ್ಕ ನೀಡಿಲ್ಲ. ಡಿಸಿ ಕನ್ವರ್ಟೆಡ್ ಬಲ್ಬ್ ಗಳನ್ನೆ ಬಳಸುತ್ತಿದ್ದೇವೆ. ಹಾಗಾಗಿ, ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದೇವೆ. ಇನ್ನು ಮೈಸೂರು ದಸರಾದಲ್ಲಿ ಬಳಸುವ ಲೈಟಿಂಗ್ಸ್ ಇಲ್ಲಿಯೂ ಬಳಕೆ ಮಾಡುತ್ತಿದ್ದೇವೆ" ಎಂದರು.
ಏನಿದು ಲೈಟಿಂಗ್ ಇನ್ಸೆಗ್ನಿಯಾ?: "ಮೊದಲಿಗೆ ಪ್ರತಿಕೃತಿಯ ಫೋಟೋ ಬಳಸಿಕೊಂಡು ಕಂಪ್ಯೂಟರ್‌ನಲ್ಲಿ ರೇಖಾ ಚಿತ್ರ ಸಿದ್ಧಪಡಿಸಿಕೊಳ್ಳುತ್ತೇವೆ. ಆ ಬಳಿಕ ನೆಲದ ಮೇಲೆ ರೇಖಾಚಿತ್ರ ರಚಿಸಿ ನಂತರ ಬಿದಿರಿನ ಪಟ್ಟಿಗಳನ್ನು ರೇಖಾಚಿತ್ರದಂತೆ ವಿನ್ಯಾಸಗೊಳಿಸಲಾಗುತ್ತದೆ. ತದನಂತರ ದೀಪಗಳನ್ನು ಅಳವಡಿಸುತ್ತೇವೆ. ಇದು ಕಷ್ಟದ ಕೆಲಸ. ಆದರೆ, ದೀಪಾಲಂಕಾರದಲ್ಲಿ ಲೈಟಿಂಗ್ ಇನ್ ಸೆಗ್ನಿಯಾಗಳೇ ಆಕರ್ಷಣೆ" ಎಂದು ಹೇಳಿದರು.
ವಿದ್ಯಾರ್ಥಿನಿ ಪ್ರಮೋದಿಣಿ ಮಾತನಾಡಿ, "ಯಾಕೆ ಲೈಟಿಂಗ್ ಮಾಡಿದ್ದಾರೆ ಅಂತ ಗೊತ್ತಿರಲಿಲ್ಲ. ಬಣ್ಣ ಬಣ್ಣದ ದೀಪಗಳನ್ನು ನೋಡಿದ ಮೇಲೆ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಬಗ್ಗೆ ತಿಳಿಯಿತು. ನಮ್ಮ ನಾಡಿನ ಸಂಸ್ಕೃತಿ, ಇತಿಹಾಸ, ಮಹಾಪುರುಷರ ಚಿತ್ರಗಳು ಲೈಟಿಂಗ್ನಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಈ ಎಲ್ಲ ದೃಶ್ಯ ನೋಡಿ ತುಂಬಾ ಖುಷಿಯಾಯಿತು" ಎಂದರು.