ಕರ್ನಾಟಕ

karnataka

ETV Bharat / bharat

ಅಬಕಾರಿ ನೀತಿ ಹಗರಣ: ದಿಲ್ಲಿ ಸಿಎಂ ಕೇಜ್ರಿವಾಲ್​ಗೆ 7ನೇ ಸಮನ್ಸ್​, 26 ರಂದು ವಿಚಾರಣೆಗೆ ಬರಲು ಸೂಚನೆ

ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಇಡಿ 7ನೇ ಸಮನ್ಸ್​ ನೀಡಿದೆ. ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಸೂಚಿಸಿದೆ.

ದಿಲ್ಲಿ ಸಿಎಂ ಕೇಜ್ರಿವಾಲ್
ದಿಲ್ಲಿ ಸಿಎಂ ಕೇಜ್ರಿವಾಲ್

By ETV Bharat Karnataka Team

Published : Feb 22, 2024, 1:47 PM IST

ನವದೆಹಲಿ:ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) 7ನೇ ಸಮನ್ಸ್​ ಗುರುವಾರ ನೀಡಿದೆ. ಫೆಬ್ರವರಿ 26 ರಂದು ವಿಚಾರಣೆಗೆ ಹಾಜರಾಗುವಂತೆ ಅದರಲ್ಲಿ ಸೂಚಿಸಲಾಗಿದೆ.

ಆಮ್​ ಆದ್ಮಿ ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್​ಗೆ ಇಲ್ಲಿಯವರೆಗೆ 6 ಸಮನ್ಸ್​ಗಳನ್ನು ಜಾರಿ ಮಾಡಲಾಗಿದ್ದು, ಎಲ್ಲ ಬಾರಿಯೂ ಅವರು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ವಿಚಾರಣೆ ಎದುರಿಸಲು ಸೂಚಿಸಿ ಸಮನ್ಸ್​ ನೀಡಲಾಗಿದೆ.

ಯಾವಾಗೆಲ್ಲಾ ಸಮನ್ಸ್​ ಜಾರಿ:ದಿಲ್ಲಿ ಸಿಎಂ ಕೇಜ್ರಿವಾಲ್​ಗೆ ಈ ಹಿಂದೆ ಅಂದರೆ, 2023 ರ ನವೆಂಬರ್​ 2, ಡಿಸೆಂಬರ್​​ 21, ಈ ವರ್ಷದ ಜನವರಿ 3, ಜನವರಿ 18 ಮತ್ತು ಫೆಬ್ರವರಿ 2, ಫೆಬ್ರವರಿ 15 ರಂದು ಸೇರಿ ಒಟ್ಟಾರೆ 6 ಬಾರಿ ತನಿಖಾ ಸಂಸ್ಥೆ ಸಮನ್ಸ್​ ನೀಡಿದೆ. ಆದರೆ, ಕೇಜ್ರಿವಾಲ್​ ಅವರು ಈ ನೋಟಿಸ್‌ಗಳನ್ನು ಕಾನೂನುಬಾಹಿರ ಎಂದು ಜರಿದಿದ್ದಾರೆ.

ಇಡಿ ಕಳುಹಿಸಿದ ಸಮನ್ಸ್‌ವೊಂದಕ್ಕೆ ಉತ್ತರಿಸಿದ್ದ ಅರವಿಂದ್ ಕೇಜ್ರಿವಾಲ್, ನಮ್ಮ ಕಾನೂನು ತಂಡವು ಸಮನ್ಸ್ ಸ್ವೀಕರಿಸಲು ಸಿದ್ಧವಿದೆ. ಇಡಿ ಸಮನ್ಸ್ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತವಾಗಿವೆ. ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಮೊದಲಿನಿಂದಲೂ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೊಂದು ರಾಜಕೀಯ ಪಿತೂರಿ ಎಂದು ಅವರು ಆರೋಪಿಸಿದ್ದಾರೆ.

ಮದ್ಯ ನೀತಿ ಹಗರಣದಲ್ಲಿ ಅರವಿಂದ್​ ಕೇಜ್ರಿವಾಲ್​ ಅವರದ್ದೂ ಪಾತ್ರವಿದೆ ಎಂದು ಇಡಿ ತನ್ನ ಚಾರ್ಜ್​ಶೀಟ್​ನಲ್ಲಿ ಹೇಳಿದೆ. ರದ್ದಾದ ದೆಹಲಿ ಅಬಕಾರಿ ನೀತಿ ಕೇಸ್​​ನ ಆರೋಪಿಗಳು ಸಿಎಂ ಜೊತೆ ನಂಟು ಹೊಂದಿದ್ದಾರೆ. ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಮತ್ತು ಪಕ್ಷದ ಸಂವಹನ ಉಸ್ತುವಾರಿ ವಿಜಯ್ ನಾಯರ್, ಕೆಲವು ಉದ್ಯಮಿಗಳನ್ನು ಈ ಪ್ರಕರಣದಲ್ಲಿ ಇಡಿ ಬಂಧಿಸಿದೆ.

ಕೋರ್ಟ್​ ವಿಚಾರಣೆಯಿಂದಲೂ ಚಕ್ಕರ್​:ತಾನು ಕರೆದ ವಿಚಾರಣೆಯಿಂದ ದೆಹಲಿ ಸಿಎಂ ಪ್ರತಿ ಬಾರಿಯೂ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ರೋಸ್​ ಅವೆನ್ಯೂ ಕೋರ್ಟ್​ಗೆ ದೂರು ನೀಡಿತ್ತು. ಅರ್ಜಿ ಆಲಿಸಿದ್ದ ಕೋರ್ಟ್​ ಕೇಜ್ರಿವಾಲ್​ಗೆ ಕೋರ್ಟ್​ ಮುಂದೆ ಹಾಜರಾಗಲು ಸೂಚಿಸಿತ್ತು. ಆದರೆ, ವಿಧಾನಸಭೆ ಬಜೆಟ್ ಅಧಿವೇಶನ ನಡೆಯುತ್ತಿರುವ ಕಾರಣ ಖುದ್ದು ಹಾಜರಾಗಲು ಸಾಧ್ಯವಿಲ್ಲ ಎಂದು ವರ್ಚುಯಲ್​ ಆಗಿ ಕಾಣಿಸಿಕೊಂಡಿದ್ದರು. ಕೋರ್ಟ್​ ಇದನ್ನು ಅಂಗೀಕರಿಸಿ ಮುಂದಿನ ವಿಚಾರಣೆಗೆ ಬರಲು ವಿನಾಯಿತಿ ನೀಡಿತ್ತು.

ಇದನ್ನೂ ಓದಿ:ಇಡಿ ವಿಚಾರಣೆಗೆ ಕೇಜ್ರಿವಾಲ್​ ಹಾಜರಾಗುವುದು ಡೌಟ್​: ಜಾರಿ ನಿರ್ದೇಶನಾಲಯದ ಮುಂದಿನ ನಡೆ ಏನು?

ABOUT THE AUTHOR

...view details