ನವದೆಹಲಿ:ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಅಂಕಿ ಅಂಶ ಮತ್ತು ಮತದಾರರ ಸೇರ್ಪಡೆಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಕಾಂಗ್ರೆಸ್ನ ಆರೋಪಕ್ಕೆ ಕೇಂದ್ರ ಚುನಾವಣಾ ಆಯೋಗ ಸವಿಸ್ತಾರವಾದ ಸ್ಪಷ್ಟನೆಯನ್ನು ಇಂದು ನೀಡಿದೆ.
ಶೇಕಡಾವಾರು ಮತದಾನ ಮತ್ತು ಅದನ್ನು ಆಯೋಗದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ವಿಧಾನದ ಬಗ್ಗೆಯೂ ಅದು ಮಾಹಿತಿ ನೀಡಿದೆ. ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ಮತದಾರರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಎಲ್ಲ ದೂರುಗಳನ್ನು ಅಲ್ಲಗಳೆದಿದೆ.
ಡೇಟಾ ಅಪ್ಡೇಟ್ ವಿಳಂಬಕ್ಕೆ ಕಾರಣವಿದು:ಕಾಂಗ್ರೆಸ್ಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಮತದಾನ ಮುಗಿದ ಬಳಿಕ ಅದರ ಶೇಕಡಾವಾರು ಪ್ರಮಾಣವನ್ನು ಸಂಜೆ 5 ರಿಂದ ರಾತ್ರಿ 11:45ರ ವರೆಗೆ ಪರಿಷ್ಕರಣೆ ಮಾಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ. ಮತದಾನ ಕೇಂದ್ರದಲ್ಲಿ ಆಯಾ ಪಕ್ಷಗಳ ಏಜೆಂಟರು ಕೂಡ ಮತದಾರರ ಲೆಕ್ಕ ಹಾಕಿರುತ್ತಾರೆ. ಅವರಿಂದಲೂ ಮಾಹಿತಿ ಪಡೆದುಕೊಂಡು ಅಂತಿಮವಾಗಿ ಕ್ರೋಢೀಕರಿಸಿ ಶೇಕಡಾ ಪ್ರಮಾಣ ಪ್ರಕಟಿಸಲಾಗುತ್ತದೆ ಎಂದು ದೃಢಪಡಿಸಿದೆ.
ಮತದಾನದ ಮುಕ್ತಾಯದ ಸಮಯದಲ್ಲಿ ಅಭ್ಯರ್ಥಿಗಳ ಅಧಿಕೃತ ಏಜೆಂಟರ ಬಳಿ ಮತದಾರರ ಮತದಾನ ವಿವರಗಳನ್ನು ನೀಡುವ ಶಾಸನಬದ್ಧ ನಮೂನೆ 17ಸಿ ಇರುವುದರಿಂದ ಚಲಾವಣೆಯಾದ ಮತದಾನದ ಪ್ರಮಾಣವನ್ನು ಬದಲಾಯಿಸುವುದು ಅಸಾಧ್ಯ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ.