ನವದೆಹಲಿ:ಯಮುನಾ ನದಿಯಲ್ಲಿ ಬಿಜೆಪಿ ವಿಷ ಹಾಕಿದೆ ಎಂಬ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನೀಡಿದ ಸ್ಪಷ್ಟನೆಗೆ ಚುನಾವಣಾ ಆಯೋಗ ಅತೃಪ್ತಿ ವ್ಯಕ್ತಪಡಿಸಿದೆ. ಮತ್ತೊಮ್ಮೆ ಸಾಕ್ಷ್ಯ ಸಮೇತ ಸ್ಪಷ್ಟವಾಗಿ ಉತ್ತರ ನೀಡಲು ಗಡುವು ನೀಡಿದೆ.
ಯಮುನಾ ನದಿಯಲ್ಲಿ ಹೆಚ್ಚಿದ ಅಮೋನಿಯಾ ಅಂಶ ಮತ್ತು ನದಿಯಲ್ಲಿ ಬಿಜೆಪಿ ವಿಷ ಹಾಕಿದೆ ಎಂಬ ತಮ್ಮ ಆರೋಪ ಮಿಶ್ರಣ ಮಾಡದಂತೆ ಚುನಾವಣಾ ಆಯೋಗವು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ಗೆ ತಾಕೀತು ಮಾಡಿದೆ. ಹರಿಯಾಣ ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಮಾತ್ರ ವಿವರಣೆ ನೀಡಲು ಮತ್ತೊಂದು ಅವಕಾಶ ನೀಡಿದೆ.
ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನೋಟಿಸ್ಗೆ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಚುನಾವಣಾ ಆಯೋಗಕ್ಕೆ ಸ್ಪಷ್ಟನೆಯ ಉತ್ತರ ನೀಡಿದ್ದರು. ಇದು ಅಸಮಂಜಸವಾಗಿದೆ ಎಂದಿರುವ ಆಯೋಗ, ಯಮುನಾಗೆ ವಿಷ ಹಾಕಿದಲ್ಲಿ ಅದರ ಪ್ರಮಾಣ, ಸ್ವರೂಪ ಮತ್ತು ವಿಧಾನದ ಬಗ್ಗೆ ನಿರ್ದಿಷ್ಟ ಮತ್ತು ಸ್ಪಷ್ಟವಾದ ವಾಸ್ತವಿಕ ಪುರಾವೆಗಳನ್ನು ಒದಗಿಸುವಂತೆ ಕೇಳಿದೆ.
ಜನವರಿ 31ರ ಬೆಳಗ್ಗೆ 11 ಗಂಟೆಯೊಳಗೆ ದೆಹಲಿ ಜಲ ಮಂಡಳಿ ಸಿಬ್ಬಂದಿಯಿಂದ ಯಮುನಾ ನದಿಯಲ್ಲಿ ವಿಷ ಇರುವ ಬಗ್ಗೆ ತಜ್ಞರಿಂದ ಪರೀಕ್ಷೆ ನಡೆಸಿ ಅದರ ವಿವರವನ್ನು ಹಂಚಿಕೊಳ್ಳಬೇಕು. ಇಲ್ಲವಾದಲ್ಲಿ ಆಯೋಗವು ಸೂಕ್ತ ಕ್ರಮ ಜರುಗಿಸಲಿದೆ ಎಂದು ಸೂಚಿಸಿದೆ.