ಕೊಟ್ಟಾಯಂ (ಕೇರಳ) :ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜೊಂದರಲ್ಲಿ ಆಘಾತಕಾರಿ ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಪ್ರಥಮ ವರ್ಷದ ಕಿರಿಯ ವಿದ್ಯಾರ್ಥಿಗಳ ಜೊತೆ ಹಿರಿಯ ವಿದ್ಯಾರ್ಥಿಗಳು ಅಮಾನುಷವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.
ತಮ್ಮನ್ನು ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ದೈಹಿಕ ಕಸರತ್ತಿಗೆ ಬಳಸುವ ಡಂಬಲ್ಸ್ಅನ್ನು ಕಟ್ಟಿ ನೇತು ಹಾಕುತ್ತಿದ್ದರು. ಚೂಪಾದ ವಸ್ತುಗಳನ್ನು ಬಳಸಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಮೂವರು ಕಿರಿಯ ವಿದ್ಯಾರ್ಥಿಗಳು ದೂರು ನೀಡಿದ್ದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕಳೆದ ನವೆಂಬರ್ನಿಂದ ನಮ್ಮ ಮೇಲೆ ನಿರಂತರವಾಗಿ ರ್ಯಾಗಿಂಗ್ ಮಾಡಲಾಗುತ್ತಿದೆ. ಖಾಸಗಿ ಅಂಗಗಳಿಗೆ ಡಂಬಲ್ಸ್, ದಿಕ್ಸೂಚಿ ಮತ್ತಿತರ ವಸ್ತುಗಳನ್ನು ಕಟ್ಟಲಾಗುತ್ತಿತ್ತು. ದೇಹವನ್ನು ಗಾಯಗೊಳಿಸಿ, ನಂತರ ಅದರ ಮೇಲೆ ಲೋಷನ್ ಹಚ್ಚುತ್ತಿದ್ದರು. ಇದಲ್ಲದೆ, ಮುಖ, ತಲೆ ಮತ್ತು ಬಾಯಿಗೆ ಕ್ರೀಮ್ ಹಚ್ಚುತ್ತಿದ್ದರು ಎಂದು ವಿದ್ಯಾರ್ಥಿಗಳು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರತಿ ಭಾನುವಾರ ತಾವು ಮದ್ಯ ಸೇವಿಸಲು ಕಿರಿಯ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದರು. ನಿರಾಕರಿಸಿದವರ ಮೇಲೆ ಹಲ್ಲೆ ನಡೆಸುತ್ತಿದ್ದರು. ಆನ್ಲೈನ್ ಮೂಲಕ 500 ರೂಪಾಯಿ ನಗದು ವರ್ಗಾಯಿಸುವಂತೆ ಬೆದರಿಕೆ ಹಾಕಲಾಗುತ್ತಿತ್ತು. ಆ ಹಣವನ್ನು ಮದ್ಯ ಸೇವನೆಗೆ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.