ಚೌಟುಪ್ಪಲ್(ತೆಲಂಗಾಣ): ಮದ್ಯದ ಅಮಲಿನಲ್ಲಿದ್ದ ತಂದೆಯ ಕೋಪಕ್ಕೆ 14 ವರ್ಷದ ಮಗ ದಾರುಣ ಸಾವು ಕಂಡ ಘಟನೆ ತೆಲಂಗಾಣದ ಚೌಟುಪ್ಪಲ್ ಎಂಬಲ್ಲಿ ಶನಿವಾರ ನಡೆದಿದೆ.
ಚೌಟುಪ್ಪಲ್ ಮಂಡಲ್ನ ಅರೆಗುಡೆಮ್ನಲ್ಲಿ ಲಾರಿ ಚಾಲಕನಾಗಿರುವ ಕಟ್ಟಾ ಸೈದುಲು ಎಂಬಾತ ಈ ಕೃತ್ಯ ಎಸಗಿದ್ದಾನೆ. ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಈತ ನೆಲೆಸಿದ್ದ. ಮೂರನೇ ಮಗ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಭಾನು ಪ್ರಸಾದ್, ತಂದೆಯ ಕೋಪಕ್ಕೆ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆಯ ಪೂರ್ಣ ವಿವರ:"ಶಾಲೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಮಗ ಭಾನು ಪ್ರಸಾದ್ ಶನಿವಾರ ರಾತ್ರಿ ಮನೆಗೆ ತಡವಾಗಿ ಆಗಮಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸೈದುಲು, ನಿರ್ದಯವಾಗಿ ಆತನ ಎದೆ ಮತ್ತು ದೇಹಕ್ಕೆ ಹೊಡೆದಿದ್ದಾನೆ. ಬಾಲಕ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾನೆ. ತಕ್ಷಣವೇ ಚೌಟುಪ್ಪಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ಆತ ಸಾವನ್ನಪ್ಪಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ ಕುಟುಂಬಸ್ಥರು ಅರೆಗುಡೆಂನ ಸ್ವಗ್ರಾಮಕ್ಕೆ ಮಧ್ಯರಾತ್ರಿಯಲ್ಲಿಯೇ ಕೊಂಡೊಯ್ದರು. ಸ್ಥಳೀಯರು, ಸಂಬಂಧಿಕರು ಬಾಲಕನ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಆದಾಗ್ಯೂ, ಪೊಲೀಸರು ಅಂತ್ಯಸಂಸ್ಕಾರಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ವಶಕ್ಕೆ ಪಡೆದರು. ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇದಾದ ಬಳಿಕ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದಾರೆ. ಭಾನುಪ್ರಸಾದ್ ತಾಯಿ ನಾಗಮಣಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ, ಸೈದುಲ್‌ನನ್ನು ವಶಕ್ಕೆ ಪಡೆಯಲಾಗಿದೆ" ಚೌಟುಪ್ಪಲ್ ಸರ್ಕಲ್ ಇನ್ಸ್‌ಪೆಕ್ಟರ್ ಮನ್ಮದ ಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಉದ್ಯಮಿಯ ಬರ್ಬರ ಹತ್ಯೆ: ತಾತನಿಗೆ 73 ಬಾರಿ ಇರಿದು ಕೊಂದ ಮೊಮ್ಮಗ!