ಅಹಮದಾಬಾದ್ (ಗುಜರಾತ್): ಗುಜರಾತ್ ಕರಾವಳಿಯಲ್ಲಿ ಪಾಕಿಸ್ತಾನದ ದೋಣಿಯಿಂದ 600 ಕೋಟಿ ರೂಪಾಯಿ ಮೌಲ್ಯದ 86 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಡಗಿನಲ್ಲಿದ್ದ 14 ಜನರನ್ನು ಬಂಧಿಸಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.
ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಂಟಿಯಾಗಿ ಅರಬ್ಬಿ ಸಮುದ್ರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಶನಿವಾರ ತಡರಾತ್ರಿ ಗುಪ್ತಚರ ಮಾಹಿತಿ ಮೇರೆಗೆ ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ, ಪಾಕಿಸ್ತಾನದ ದೋಣಿಯಲ್ಲಿದ್ದ 14 ಸಿಬ್ಬಂದಿಯನ್ನು ವಶಕ್ಕೆ ಪಡೆದು, 600 ಕೋಟಿ ರೂಪಾಯಿ ಮೌಲ್ಯದ ಸುಮಾರು 86 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೋಸ್ಟ್ ಗಾರ್ಡ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಪಾಕಿಸ್ತಾನದ ದೋಣಿಯಿಂದ ಯಾವ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಕೋಸ್ಟ್ ಗಾರ್ಡ್ ಇನ್ನೂ ಬಹಿರಂಗಪಡಿಸಿಲ್ಲ. ಈ ಕಾರ್ಯಾಚರಣೆಗಾಗಿ ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಲಾಗಿತ್ತು. ಎನ್‌ಸಿಬಿ ಮತ್ತು ಎಟಿಎಸ್ ಅಧಿಕಾರಿಗಳ ತಂಡವು ದೋಣಿಯನ್ನು ಪತ್ತೆಹಚ್ಚಲು ಐಸಿಜಿ 'ರಾಜರತನ್' ಹಡಗನ್ನು ಬಳಸಲಾಗಿತ್ತು. 14 ಬಂಧಿತರನ್ನು ಹೆಚ್ಚಿನ ತನಿಖೆಗಾಗಿ ಪೋರಬಂದರ್‌ಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದೆ.