ಬುಲ್ಡಾನಾ(ಮಹಾರಾಷ್ಟ್ರ):ಇಲ್ಲಿನಚಿಖಾಲಿ ತಾಲೂಕಿನ ವೈದ್ಯರೊಬ್ಬರು ಮಹಿಳೆಯ ಕಣ್ಣಿನಿಂದ 60 ಜೀವಂತ ಹುಳುಗಳನ್ನು ಹೊರತೆಗೆದಿದ್ದಾರೆ. ಜ್ಯೋತಿ ಗಾಯಕ್ವಾಡ ಎಂಬ ಮಹಿಳೆಗೆ ನೇತ್ರ ತಜ್ಞ ಡಾ.ಸ್ವಪ್ನಿಲ್ ಮೊರ್ವಾಲ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದರು.
ಮಲಗಣಿ ಎಂಬಲ್ಲಿನ ರೈತ ಮಹಿಳೆ ಜ್ಯೋತಿ ಗಾಯಕ್ವಾಡ ತಿಂಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಕಣ್ಣಿಗೆ ಮಣ್ಣಿನ ಕಣಗಳು ಬಿದ್ದಿವೆ. ಅಂದಿನಿಂದ ಕಣ್ಣು ನೋವಿನಿಂದ ಬಳಲುತ್ತಿದ್ದರು. ಮೊದಮೊದಲು ನಿರ್ಲಕ್ಷಿಸಿದ್ದಾರೆ. ಆದರೆ ತೊಂದರೆ ಹೆಚ್ಚಾದಂತೆ ನಮ್ಮ ಬಳಿ ಬಂದು ಕಣ್ಣು ತಪಾಸಣೆ ಮಾಡಿಸಿಕೊಂಡರು. ಆಗ ಅವರ ಕಣ್ಣಲ್ಲಿ ಹುಳುಗಳಿರುವುದು ಗೊತ್ತಾಯಿತು. ಕೂಡಲೇ ಅವುಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಇಲ್ಲದಿದ್ದರೆ ಅವರು ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು ಎಂದು ವೈದ್ಯ ಡಾ.ಸ್ವಪ್ನಿಲ್ ಮೊರ್ವಾಲ್ ತಿಳಿಸಿದರು.
ಈ ಹುಳುಗಳನ್ನು ತೆಗೆಯಲು ಸುಮಾರು 2 ಗಂಟೆ ಬೇಕಾಯಿತು. ಈಗ ಜ್ಯೋತಿ ಅವರಿಗೆ ಯಾವುದೇ ತೊಂದರೆ ಇಲ್ಲ. ಅವರ ಕಣ್ಣು ಚೆನ್ನಾಗಿದೆ ಎಂದು 'ಈಟಿವಿ ಭಾರತ್' ಪ್ರತಿನಿಧಿಗೆ ಡಾ.ಸ್ವಪ್ನಿಲ್ ಮಾಹಿತಿ ನೀಡಿದರು.