ಭರತಪುರ (ರಾಜಸ್ಥಾನ):ರಾಜಸ್ಥಾನದ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದಾದ ಭರತಪುರ ರಾಜಮನೆತನದ ಕೌಟುಂಬಿಕ ಗಲಾಟೆ ಈಗ ಬೀದಿಗೆ ಬಂದಿದೆ. ರಾಜಮನೆತನದ ಸದಸ್ಯ, ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ಅವರು ತಮ್ಮ ಪತ್ನಿ ಮತ್ತು ಮಗ ಸೇರಿಕೊಂಡು ನನಗೆ ಥಳಿಸಿದ್ದಾರೆ. ಸರಿಯಾದ ಊಟವನ್ನೂ ನೀಡುತ್ತಿಲ್ಲ ಮತ್ತು ಜನರನ್ನು ಭೇಟಿಯಾಗಲು ಸಹ ಅನುಮತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ ಪತ್ನಿ ಮತ್ತು ಮಗನಿಂದ ಜೀವನಾಂಶಕ್ಕೂ ಸಿಂಗ್ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ, ಪತ್ನಿ, ಮಾಜಿ ಸಂಸದೆ ದಿವ್ಯಾ ಸಿಂಗ್ ಮತ್ತು ಮಗ ಅನಿರುದ್ಧ್ ಸಿಂಗ್ ಇಬ್ಬರೂ ವಿಶ್ವೇಂದ್ರ ಸಿಂಗ್ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಪ್ರಕರಣದಲ್ಲಿ ನಾವೇ ನಿಜವಾದ ಸಂತ್ರಸ್ತರು ಎಂದು ಹೇಳಿಕೊಂಡಿದ್ದಾರೆ.
ರಾಜಮನೆತನದ ಸದಸ್ಯರಾದ ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ತಮ್ಮ ಪತ್ನಿ ಮಾಜಿ ಸಂಸದೆ ದಿವ್ಯಾ ಸಿಂಗ್ ಮತ್ತು ಪುತ್ರ ಅನಿರುದ್ಧ್ ಸಿಂಗ್ ವಿರುದ್ಧ ಉಪವಿಭಾಗಾಧಿಕಾರಿ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದು, ಇಬ್ಬರಿಂದಲೂ ತಿಂಗಳಿಗೆ 5 ಲಕ್ಷ ರೂ. ಜೀವನಾಂಶ ಕೊಡಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಅಲ್ಲದೇ, ನನ್ನನ್ನು ಮನೆ (ಮೋತಿ ಮಹಲ್) ತೊರೆಯುವಂತೆ ಮಾಡಲಾಗಿದೆ. ನಾನು ಅಲೆಮಾರಿ ಜೀವನ ನಡೆಸುತ್ತಿದ್ದೇನೆ. ಕೆಲವೊಮ್ಮೆ ನಾನು ಸರ್ಕಾರಿ ಮನೆಯಲ್ಲಿ ಮತ್ತು ಕೆಲವೊಮ್ಮೆ ಹೋಟೆಲ್‌ನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಕೊಲೆಗೆ ಸಂಚು ಆರೋಪ:ಮುಂದುವರೆದು, ನಾನು ಒಂದು ಕೋಣೆಗೆ ಬಂಧಿಯಾಗಿದ್ದೆ. ನಾನು ಭರತಪುರಕ್ಕೆ ಬಂದಾಗ ನನಗೆ ಮನೆಯೊಳಗೆ ಪ್ರವೇಶಿಸಲು ಸಹ ಅನುಮತಿಸುವುದಿಲ್ಲ. ಇನ್ಮುಂದೆ ಮನೆಯಲ್ಲಿ ನನ್ನ ಹೆಂಡತಿ ಮತ್ತು ಮಗನ ಜೊತೆ ಇರಲು ಸಾಧ್ಯವಿಲ್ಲ. ಪತ್ನಿ ಮತ್ತು ಮಗ ಇಬ್ಬರು ಸೇರಿ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ. ನನ್ನ ಜೀವನವನ್ನು ಕೊನೆಗೊಳಿಸುವುದೇ ಅವರ ಉದ್ದೇಶವಾಗಿದೆ. ನಂತರ ಎಲ್ಲ ಆಸ್ತಿಯನ್ನು ದೋಚಬಹುದು ಎಂದು ಯೋಜನೆಯಲ್ಲಿದ್ದಾರೆ ಎಂದೂ ವಿಶ್ವೇಂದ್ರ ಸಿಂಗ್ ಆರೋಪಿಸಿದ್ದಾರೆ.
ಪತ್ನಿ ಮತ್ತು ಮಗ ನನಗೆ ಚಹಾ ಮತ್ತು ನೀರು ಕೊಡುವುದನ್ನೂ ನಿಲ್ಲಿಸಿದ್ದಾರೆ. ಅವರ ನಡವಳಿಕೆ ಸುಧಾರಿಸಬಹುದು ಎಂದು ನಾನು ಭಾವಿಸಿದ್ದೆ. ಅದು ಇದುವರೆಗೂ ಸಾಧ್ಯವಾಗಿಲ್ಲ. ನನ್ನ ಬಟ್ಟೆಗಳನ್ನು ಬಾವಿಗೆ ಎಸೆದಿದ್ದಾರೆ. ಕಾಗದ ಪತ್ರಗಳು, ದಾಖಲೆಗಳು ಇತ್ಯಾದಿಗಳನ್ನು ಹರಿದು ಹಾಕಿ, ಕೊಠಡಿಗಳಿಂದ ವಸ್ತುಗಳನ್ನು ಹೊರಹಾಕಿದ್ದಾರೆ. ನನ್ನ ಕೋಣೆಗೆ ಬೀಗ ಹಾಕಿ, ನನ್ನನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದ್ದಾರೆ. ಹೀಗಾಗಿ ನಾನು ಮನೆಯಿಂದ ಹೊರಹೋಗಬೇಕಾಗಿದೆ. ಮನೆಯಿಂದ ಹೊರಡುವಾಗ ನನ್ನ ಬಳಿಯಿದ್ದ ಬಟ್ಟೆಯನ್ನು ಮಾತ್ರ ತಂದಿದ್ದೇನೆ. ಅಂದಿನಿಂದ ನಾನು ಹೀಗೆಯೇ ಬದುಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.