ಶಾದೋಲ್ (ಮಧ್ಯಪ್ರದೇಶ): ಹುಣ್ಣಿಮೆಯ ದಿನ ತಾಯಿಯಾಗಬಾರದು ಎಂಬುದು ಸೇರಿದಂತೆ ಪ್ರತಿಭಾನ್ವಿತ ಮಕ್ಕಳನ್ನು ಹೇರಲು ಏನು ಮಾಡಬೇಕು, ಮಾಡಬಾರದು ಎಂಬ ಕುರಿತು ಮಧ್ಯಪ್ರದೇಶದ ಮಹಿಳಾ ಡಿಜಿಪಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿರುವ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.
ಬಾಲಕಿಯರ ಸುರಕ್ಷತೆ ಕುರಿತು ರಾಜ್ಯ ಸರ್ಕಾರದ ಜಾಗೃತಿ ಕಾರ್ಯಕ್ರಮದಲ್ಲಿ ಅಕ್ಟೋಬರ್ 4ರಂದು ಖಾಸಗಿ ಶಾಲೆಯ 10 ಮತ್ತು 12ನೇ ತರಗತಿ ಮಕ್ಕಳಿಗೆ ಶಾದೋಲ್ ಡಿಐಜಿ ಸವಿತಾ ಸೊಹನೆ ಮಾತನಾಡಿದ್ದಾರೆ. ಕಳೆದೆರಡು ದಿನಗಳಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೀವು ಮುಂದಿನ ಪೀಳಿಗೆಯನ್ನು ಭೂಮಿ ಮೇಲೆ ತರುವವರು. ಅದರ ಬಗ್ಗೆ ಹೇಗೆ ತಿಳಿಯಲಿದ್ದೀರಾ ಎಂದು ಅವಿವಾಹಿತ ಡಿಐಜಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಗೌರವ ಉತ್ತೇಜನೆ ಮತ್ತು ಸುರಕ್ಷಿತ ಪರಿಸರ ರೂಪಿಸುವ 'ಮೈ ಹೂ ಅಭಿಮನ್ಯು' (ನಾನು ಅಭಿಮನ್ಯು)ಕಾರ್ಯಕ್ರಮದಲ್ಲಿ ಡಿಐಜಿ ಮಾತನಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚರ್ಚೆಗೀಡು ಮಾಡಿದ ಡಿಐಜಿ ಮಾತು:ಮಕ್ಕಳ ಬಗ್ಗೆ ನೀವು ಯೋಜನೆ ರೂಪಿಸಬೇಕು. ಅದರಲ್ಲೂ ಹುಣ್ಣಿಮೆ ದಿನ ತಾಯಿ ಆಗುವ ಯೋಚನೆ ಮಾಡಬಾರದು ಎಂಬುದು ಮೊದಲ ಅಂಶ. ಸೂರ್ಯನ ಎದುರು ಮಂಡಿಯೂರಿ, ಅರ್ಘ್ಯ ಅರ್ಪಿಸುವ ಮೂಲಕ ಪ್ರತಿಭಾನ್ವಿತ ಮಕ್ಕಳನ್ನು ಪಡೆಯಬಹುದು ಎಂದಿದ್ದಾರೆ.
ಧರ್ಮಗ್ರಂಥಗಳಲ್ಲಿ ಹೇಳಿರುವುದನ್ನೇ ಉಲ್ಲೇಖಿಸಿದ್ದೇನೆ:ಈ ಕುರಿತು ಡಿಐಜಿ ಅವರನ್ನು ಮಾಧ್ಯಮಗಳು ಸಂಪರ್ಕಿಸಿದಾಗ, ಅವರು ತಾನು ಇದನ್ನು ಧರ್ಮಗ್ರಂಥಗಳಲ್ಲಿ ಓದಿದ್ದು, ಹಿಂದೂ ಅಧ್ಯಾತ್ಮ ಗುರುಗಳ ಪ್ರವಚನದಲ್ಲಿ ಕೂಡ ಕೇಳಿದ್ದಾಗಿ ತಿಳಿಸಿದ್ದಾರೆ.
ಪ್ರತಿ ತಿಂಗಳು ನಾನು ಶಾಲೆಗಳಲ್ಲಿ ಮಾತನಾಡುತ್ತೇನೆ. 31ನೇ ವಯಸ್ಸಿಗೆ ಪೊಲೀಸ್ ಸೇವೆ ಸೇರುವ ಮೊದಲು ನಾನು ಸಾಗರ್ ಜಿಲ್ಲೆಯ ಸರ್ಕಾರಿ ಇಂಟರ್ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕಾಲ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದೆ. ನಾನು ಪಡೆದ ಅಧ್ಯಾತ್ಮದ ಮಾಹಿತಿ ಆಧಾರದ ಮೇಲೆ ಈ ಬಗ್ಗೆ ಮಾತನಾಡಿದ್ದೇನೆ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಹುಣ್ಣಿಮೆ ದಿನ ಮಕ್ಕಳನ್ನು ಮಾಡಿಕೊಳ್ಳಬಾರದು ಯಾಕೆ ಎಂಬುದಕ್ಕೆ ವಿವರಣೆ ನೀಡಿರುವ ಅವರು, ಈ ದಿನವನ್ನು ಪವಿತ್ರ ದಿನ ಎಂದು ಹಿಂದೂ ಧರ್ಮದಲ್ಲಿ ಭಾವಿಸಲಾಗಿದೆ ಎಂದರು.
ತಮ್ಮ ಈ ಭಾಷಣಕ್ಕೆ ಟೀಕೆಗಳು ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಒಂದು ಗಂಟೆಗಳ ಕಾಲ ನಾನು ಭಾಷಣ ಮಾಡಿದ್ದು, ಮಹಿಳೆಯರು ಮತ್ತು ಬಾಲಕಿಯರ ವಿರುದ್ಧ ನಡೆಯುತ್ತಿರುವ ಅಪರಾಧಗಳ ನಡುವೆ ಹೆಣ್ಣು ಮಗುವಿಗೆ ಗೌರವ ಮೂಡಿಸುವ ಕುರಿತು ಮಾತನಾಡಿದ್ದೇನೆ. ಆದರೆ, ಭಾಷಣದ ಕೆಲವು ತುಣುಕುಗಳನ್ನು ಮಾತ್ರ ಪ್ರಸಾರ ಮಾಡುವ ಮೂಲಕ ಟೀಕೆ ಮಾಡುತ್ತಿರುವುದು ಸರಿಯಲ್ಲ, ಯಾವ ಸಂದರ್ಭದಲ್ಲಿ ಇದನ್ನು ಹೇಳಲಾಗಿದೆ ಎಂಬುದನ್ನು ಮರೆಮಾಚಿ ಈ ರೀತಿ ಟೀಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ .(PTI)
ಇದನ್ನೂ ಓದಿ:ಎರಡೂ ಕೈಗಳಿಂದ ಬರೆಯುವ ವಿದ್ಯಾರ್ಥಿಗಳು: ಮಹಾರಾಷ್ಟ್ರದಲ್ಲೊಂದು ವಿಶಿಷ್ಟ ಶಾಲೆ