ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿ ಸೇವೆ ವಿಳಂಬದಿಂದ 80 ವರ್ಷದ ಪ್ರಯಾಣಿಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) 30 ಲಕ್ಷ ರೂಪಾಯಿ ದಂಡದ ಬರೆ ಎಳೆದಿದೆ.
ಈ ವಿಷಯವನ್ನು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಗಾಲಿಕುರ್ಚಿ ಸೇವೆ ವಿಳಂಬದಿಂದ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಸಂಬಂಧ ಯಾವುದೇ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿದ್ದ ಬಗ್ಗೆ ಮಾಹಿತಿಯನ್ನು ಏರ್ ಇಂಡಿಯಾ ನೀಡಿಲ್ಲ. ಇದಲ್ಲದೇ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ತೆಗೆದುಕೊಂಡ ಮತ್ತು ಸರಿಪಡಿಸುವ ಯಾವುದೇ ಕ್ರಮಗಳ ಕುರಿತ ಮಾಹಿತಿ ಒದಗಿಸಲು ಸಂಸ್ಥೆ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ಹಿನ್ನೆಲೆ: ಫೆಬ್ರವರಿ 12ರಂದು ವೃದ್ಧ ದಂಪತಿ ಏರ್ ಇಂಡಿಯಾ ವಿಮಾನದ ಮೂಲಕ ಮುಂಬೈ ಏರ್ಪೋರ್ಟ್ಗೆ ಬಂದಿಳಿದಿದ್ದರು. ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದರು. ದಂಪತಿ ವಿಮಾನ ಇಳಿದ ಬಳಿಕ ಟರ್ಮಿನಲ್ಗೆ ಹೋಗಲು ಎರಡು ಗಾಲಿಕುರ್ಚಿಗಳನ್ನೂ ಕಾಯ್ದಿರಿಸಿದ್ದರು. ಆದರೆ, ಏರ್ ಇಂಡಿಯಾ ಒಂದೇ ಗಾಲಿಕುರ್ಚಿ ಒದಗಿಸಿತ್ತು. ಇನ್ನೊಂದರ ಸೇವೆ ಒದಗಿಸುವಲ್ಲಿ ವಿಳಂಬ ಮಾಡಿತ್ತು.