ನವದೆಹಲಿ:ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ) ಅಡಿಯಲ್ಲಿ ಕರ್ನಾಟಕ ಸರ್ಕಾರಕ್ಕೆ 2023-24ರ ಹಣಕಾಸು ವರ್ಷದ 3ನೇ ಕಂತಿನ 235.14 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕೃಷಿ ವಿಕಾಸ ಯೋಜನೆಯಡಿ ಈ ಮೊತ್ತವನ್ನು ರಾಜ್ಯ ಸರ್ಕಾರವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಡಿಪಿಆರ್, ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ, ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಕೃಷಿ ಯಾಂತ್ರೀಕರಣದ ಉಪ ಮಿಷನ್, ಪ್ರತಿ ಹನಿ, ಹೆಚ್ಚು ಬೆಳೆ, ಕೃಷಿ ಅರಣ್ಯ ಮತ್ತು ಬೆಳೆ ವೈವಿಧ್ಯೀಕರಣ ಕಾರ್ಯಕ್ರಮಕ್ಕೆ ಬಳಸಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಅನುದಾನ ಯಾವುದಕ್ಕೆ ಬಳಕೆ?: ಈ ಅನುಮೋದಿಸಲಾದ ಮೊತ್ತವನ್ನು ಗೋದಾಮು ನಿರ್ಮಾಣ, ನೀರು ಕೊಯ್ಲು ರಚನೆ, ಪ್ರಾಥಮಿಕ ಪ್ರಾತ್ಯಕ್ಷಿಕೆ ಘಟಕಗಳ ಸ್ಥಾಪನೆ, ಟ್ರಾಕ್ಟರ್‌ಗಳು, ಪವರ್ ಟಿಲ್ಲರ್‌ಗಳು ಮತ್ತು ಡ್ರೋನ್‌ಗಳ ಖರೀದಿ, ಸಮಗ್ರ ಕೃಷಿಯ ಉತ್ತೇಜನ, ಮಣ್ಣಿನ ಆರೋಗ್ಯ ಫಲವತ್ತತೆ ಮತ್ತು ಕಸ್ಟಮ್ ನೇಮಕ ಕೇಂದ್ರಗಳು ಸೇರಿ ಕೃಷಿ ವಲಯದ ಮೂಲಸೌಕರ್ಯ ಸುಧಾರಣೆಗೆ ಬಳಸಲಾಗುವುದು ಎಂದೂ ಶೋಭಾ ಕರಂದ್ಲಾಜೆ ಹೇಳಿದ್ದಾರೆ.