ನವದೆಹಲಿ:ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ಧತೆಯಲ್ಲಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಆಪ್) ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಮೂಲಕ, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂಬುದರ ಸುಳಿವು ನೀಡಿದೆ.
ಪಟ್ಟಿಯಲ್ಲಿ ಘೋಷಿತವಾಗಿರುವ ಅಭ್ಯರ್ಥಿಗಳ ಪೈಕಿ ಮೂವರು ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದೆ. ಅವರ ಬದಲಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ವಲಸೆ ಬಂದ ಆರು ನಾಯಕರಿಗೆ ಮಣೆ ಹಾಕಲಾಗಿದೆ. ಈ 11 ಪೈಕಿ 8 ಬಿಜೆಪಿ ಶಾಸಕರು ಗೆದ್ದಿರುವ ಕ್ಷೇತ್ರಗಳಾಗಿವೆ. ಹೀಗಾಗಿ ಯಾವುದೇ ವಿರೋಧ, ಗೊಂದಲವಿಲ್ಲದ ಕಾರಣ ಮತ್ತು ಚುನಾವಣೆಗೆ ಪೂರ್ವಭಾವಿ ಸಜ್ಜಾಗಲು ಅಭ್ಯರ್ಥಿಗಳನ್ನು ಅಖೈರು ಮಾಡಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಎಎಪಿ ಸಂಚಾಲಕ ಗೋಪಾಲ್ ರೈ, ಮೊದಲ ಪಟ್ಟಿಯಲ್ಲಿ 11 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ ಎಂಟು ಕ್ಷೇತ್ರಗಳು ಪಕ್ಷದ ವಶದಲ್ಲಿಲ್ಲದ ಕಾರಣ ಅಭ್ಯರ್ಥಿಗಳ ಹೆಸರನ್ನು ಮೊದಲೇ ಘೋಷಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಚರ್ಚಿಸಿದ ನಂತರ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಯಿತು. ಕಾರ್ಯಕ್ಷಮತೆ, ಸಮೀಕ್ಷೆಗಳು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಆಧರಿಸಿ ಟಿಕೆಟ್ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.