ನವದೆಹಲಿ:ಬಹುನಿರೀಕ್ಷಿತ ಲೋಕಸಭೆ ಚುನಾವಣೆಗೆ ಆಯೋಗವು ತಾತ್ಕಾಲಿಕ ದಿನಾಂಕವನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 16 ಅನ್ನು 'ಚುನಾವಣಾ ದಿನಾಂಕ' ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು ರವಾನಿಸಿರುವ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದು ಚುನಾವಣಾ ಸಿದ್ಧತೆಗೆ ಸೂಚಿಸಲಾದ ತಾತ್ಕಾಲಿಕ ದಿನಾಂಕ ಎಂದು ಕೇಂದ್ರ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ.
ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಏಪ್ರಿಲ್ 16 ರಂದು ಲೋಕಸಭೆ ಚುನಾವಣೆ ಎಂದು ಭಿತ್ತರವಾಗುತ್ತಿದೆ. ಆದರೆ, ಇದು ಅಧಿಕಾರಿಗಳಿಗೆ ಚುನಾವಣಾ ಸಿದ್ಧತೆ ನಡೆಸಲು ಸೂಚಿಸಿ ಕಳುಹಿಸಲಾದ ದಿನಾಂಕವಾಗಿದೆ. ಅಂತಿಮ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
ಟಿಪ್ಪಣಿಯಲ್ಲಿ ಏನಿದೆ?:ಜನವರಿ 19 ರಂದು ದೆಹಲಿ ಮುಖ್ಯ ಚುನಾವಣಾಧಿಕಾರಿಯಿಂದ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಟಿಪ್ಪಣಿ ರವಾನಿಸಲಾಗಿದೆ. ಅದರಲ್ಲಿ ಏಪ್ರಿಲ್ 16 ರಂದು 'ಲೋಕಸಭೆ ಚುನಾವಣೆ' ಎಂದು ನಮೂದಿಸಲಾಗಿದೆ. ಇದನ್ನು ಬಿಟ್ಟು ಮತದಾನ, ಮತ ಎಣಿಕೆಯ ಮಾಹಿತಿ ಇಲ್ಲ. ಇದು ಅಧಿಕಾರಿಗಳಿಗೆ ಚುನಾವಣಾ ಸಿದ್ಧತೆಯ ಕ್ರಮಗಳನ್ನು ಕೈಗೊಳ್ಳಲು ನೀಡಿದ ಅವಧಿ ಎಂದು ಹೇಳಲಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಯೋಜಿಸಿ ಪೂರ್ಣಗೊಳಿಸುವ ಅಗತ್ಯವಿದೆ. ಹೀಗಾಗಿ ದೆಹಲಿ ಸಿಇಒ ಕ್ರಮಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಉಲ್ಲೇಖಿಸಿ ತಾತ್ಕಾಲಿಕ ಮತದಾನದ ದಿನಾಂಕವನ್ನು ಉಲ್ಲೇಖಿಸಿದ್ದಾರೆ. ಅಂತಿಮ ದಿನಾಂಕ ಮುಂದಿನ ದಿನಗಳಲ್ಲಿ ಹೊರಬೀಳಲಿದೆ.
ಕೇಂದ್ರ ಆಯೋಗದ ಸ್ಪಷ್ಟನೆ:ದೆಹಲಿ ಮುಖ್ಯ ಚುನಾವಣಾಧಿಕಾರಿಗಳು ಹೊರಡಿಸಿದ ಟಿಪ್ಪಣಿಯಲ್ಲಿನ ದಿನಾಂಕವು ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಚುನಾವಣಾ ಆಯೋಗವು, ಇದು ಜಿಲ್ಲೆಗಳಲ್ಲಿ ಅಧಿಕಾರಿಗಳು ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ ಕಾಲ್ಪನಿಕ ದಿನಾಂಕವಾಗಿದೆ. ಇದು ಅಂತಿಮ ದಿನಾಂಕವಲ್ಲ. ಅನ್ನು ಆಯೋಗ ಮುಂದೆ ಪ್ರಕಟಿಸಲಿದೆ. ನಮೂದಿಸಲಾದ ದಿನಾಂಕವು ನಿಜವಾದ ವೇಳಾಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದನ್ನು ಇಸಿಐ ಸೂಕ್ತ ಸಮಯದಲ್ಲಿ ಘೋಷಿಸುತ್ತದೆ ಎಂದು ಹೇಳಿದೆ.
ಚುನಾವಣಾ ಆಯೋಗಗಳು ಇತ್ತೀಚೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಜಾಗೃತಿ ಅಭಿಯಾನ ಮೂಡಿಸುತ್ತಿವೆ. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಚುನಾವಣಾ ಘೋಷಣೆಗೆ ಸುಮಾರು ಮೂರು ತಿಂಗಳ ಮೊದಲು ಜಾಗೃತಿ ಅಭಿಯಾನವನ್ನು ಪ್ರಾರಂಭಿಸಬೇಕಾಗುತ್ತದೆ. ಹೀಗಾಗಿ ಕಳೆದ ಚುನಾವಣೆಯ ಘೋಷಣೆಯ ದಿನಾಂಕವನ್ನು ಪರಿಗಣಿಸಿ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ. 2019 ರ ಲೋಕಸಭೆ ಚುನಾವಣೆಯು ಮಾರ್ಚ್ 10 ರಂದು ನಡೆಸಲಾಯಿತು. ಏಪ್ರಿಲ್ 11 ರಿಂದ ಮೇ 19 ರವರೆಗೆ 7 ಹಂತಗಳಲ್ಲಿ ಮತದಾನ ನಡೆಸಲಾಗಿತ್ತು. ಮೇ 23 ರಂದು ಮತ ಎಣಿಕೆ ನಡೆದಿತ್ತು.
ಇದನ್ನೂ ಓದಿ:ಒಂದು ರಾಷ್ಟ್ರ, ಒಂದು ಚುನಾವಣೆ : ಕೋವಿಂದ್ ಸಮಿತಿ ವಿಸರ್ಜನೆಗೆ ಖರ್ಗೆ ಆಗ್ರಹ