ಕರ್ನಾಟಕ

karnataka

ETV Bharat / bharat

ಪಂಜಾಬ್ ರೈತರಿಂದ ನಾಳೆ ದೆಹಲಿ ಚಲೋ: ಸಿಂಘು ಗಡಿಯಲ್ಲಿ ಬಿಗಿ ಭದ್ರತೆ - PUNJAB FARMERS PROTEST

ಶುಕ್ರವಾರ ಪಂಜಾಬ್ ರೈತರು ದೆಹಲಿ ಚಲೋ ನಡೆಸಲಿದ್ದಾರೆ.

ಫೆಬ್ರವರಿಯಲ್ಲಿ ನಡೆದಿದ್ದ ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
ಫೆಬ್ರವರಿಯಲ್ಲಿ ನಡೆದಿದ್ದ ರೈತರ ಪ್ರತಿಭಟನೆ (ಸಂಗ್ರಹ ಚಿತ್ರ) (IANS)

By PTI

Published : Dec 5, 2024, 6:31 PM IST

ನವದೆಹಲಿ: ಡಿಸೆಂಬರ್ 6ರಂದು ಪಂಜಾಬ್ ರೈತರ ದೆಹಲಿ ಚಲೋ ಮೆರವಣಿಗೆ ನಡೆಯಲಿದ್ದು, ಸಿಂಘು ಗಡಿಯಲ್ಲಿ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ. ಆದಾಗ್ಯೂ, ಸಿಂಘು ಗಡಿಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ರಾಷ್ಟ್ರ ರಾಜಧಾನಿಯತ್ತ ರೈತರ ಜಾಥಾಗೆ ಮುಂಚಿತವಾಗಿ ದೆಹಲಿ-ಚಂಡೀಗಢ ಹೆದ್ದಾರಿಯ ಸಿಂಘು ಗಡಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಿದ್ದೇವೆ. ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಿದ್ದೇವೆ ಮತ್ತು ರೈತರ ಚಲನವಲನಗಳ ಬಗ್ಗೆ ನಮಗೆ ಯಾವುದೇ ಗುಪ್ತಚರ ಮಾಹಿತಿ ಸಿಕ್ಕರೆ, ಅದಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಪ್ರಸ್ತುತ, ಸಿಂಘು ಗಡಿಯಲ್ಲಿ ಜಿಆರ್​ಎಪಿ-4 ಕ್ರಮಗಳು ಮತ್ತು ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಪೊಲೀಸರು ಚೆಕ್ ಪೋಸ್ಟ್​ಗಳನ್ನು ಸ್ಥಾಪಿಸಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್​ಪಿ) ಕಾನೂನು ಖಾತರಿಗೆ ಆಗ್ರಹಿಸಿ ರೈತರು ಈ ಹಿಂದೆ ಫೆಬ್ರವರಿ 13 ಮತ್ತು ಫೆಬ್ರವರಿ 21 ರಂದು ದೆಹಲಿಯತ್ತ ಮೆರವಣಿಗೆ ನಡೆಸಲು ಪ್ರಯತ್ನಿಸಿದ್ದರು. ಆದರೆ ಅವರನ್ನು ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖನೌರಿಯಲ್ಲಿ ತಡೆಯಲಾಗಿತ್ತು.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ರೈತರು ಅಂದಿನಿಂದ ಶಂಭು ಮತ್ತು ಖನೌರಿ ಗಡಿ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದಾರೆ. ಬುಧವಾರ ಹರಿಯಾಣದ ಅಂಬಾಲಾ ಜಿಲ್ಲಾಡಳಿತವು ದೆಹಲಿ ಚಲೋ ಮಾರ್ಚ್​ ಬಗ್ಗೆ ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದು, ದೆಹಲಿ ಪೊಲೀಸರಿಂದ ಅನುಮತಿ ಪಡೆದ ನಂತರವೇ ಜಾಥಾ ಆರಂಭಿಸುವಂತೆ ಸೂಚಿಸಿದೆ. ಆದರೆ ದೆಹಲಿ ಚಲೋ ನಡೆಸಲು ಅನುಮತಿ ಕೋರಿ ಪಂಜಾಬ್ ರೈತರಿಂದ ಈವರೆಗೆ ಯಾವುದೇ ಮನವಿ ಬಂದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸುವ ಬಿಎನ್ಎಸ್ಎಸ್​ನ ಸೆಕ್ಷನ್ 163 ಜಾರಿಗೊಳಿಸಲಾಗಿದೆ. ರೈತರ ನಿಯೋಗವು ಅಂಬಾಲಾದ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಡಿಸೆಂಬರ್ 6ರಂದು ದೆಹಲಿಯತ್ತ ತಮ್ಮ ಕಾಲ್ನಡಿಗೆ ಮೆರವಣಿಗೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಸೋಮವಾರ ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಹೇಳಿದರು.

ರೈತರ ಬೇಡಿಕೆಗಳೇನು?: ಎಂಎಸ್​ಪಿ ಕಾನೂನು ಖಾತರಿಯ ಜೊತೆಗೆ ರೈತರು ಸಾಲ ಮನ್ನಾ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡುವಂತೆ ಮತ್ತು ವಿದ್ಯುತ್ ಶುಲ್ಕ ಹೆಚ್ಚಿಸದಂತೆ ರೈತರು ಒತ್ತಾಯಿಸುತ್ತಿದ್ದಾರೆ. 2021ರ ಲಖಿಂಪುರ್ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ, 2013ರ ಭೂಸ್ವಾಧೀನ ಕಾಯ್ದೆಯನ್ನು ಪುನಃಸ್ಥಾಪಿಸುವುದು ಮತ್ತು 2020-21ರಲ್ಲಿ ಹಿಂದಿನ ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಕೂಡ ಅವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಮುದ್ದಾಗಿ ಸಾಕಿದ್ದ ಗಿಳಿ ಕಾಣೆ: ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ ಮಹಿಳೆ

ABOUT THE AUTHOR

...view details