ನವದೆಹಲಿ:ಪ್ರಮಾಣ ವಚನ ಸ್ವೀಕಾರ ಸಮಾರಂಭ ವೇಳೆ ಕಾಣಿಸಿಕೊಂಡ ಪ್ರಾಣಿ ಬಗ್ಗೆ ಇದ್ದ ಎಲ್ಲ ಸಂಶಯಗಳಿಗೆ ದೆಹಲಿ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರಮಾಣವಚನ ಸಮಾರಂಭದ ವೇಳೆ ಕಂಡು ಬಂದ ಪ್ರಾಣಿ, ಸಾಮಾನ್ಯ ಮನೆಯ ಬೆಕ್ಕು ಎಂದು ದೆಹಲಿ ಪೊಲೀಸರು ಸೋಮವಾರ ಸ್ಪಷ್ಟಪಡಿಸಿದ್ದಾರೆ, ಅದು ಕಾಡು ಪ್ರಾಣಿ ಎಂಬ ಗಾಳಿ ಸುದ್ದಿಯನ್ನು ಪೊಲೀಸರು ಅಲ್ಲಗಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಚಿರತೆಯಂತಹ ಪ್ರಾಣಿ ಕಂಡು ಬಂದಿತ್ತು. ಈ ಸುದ್ದಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
"ಕೆಲವು ಮಾಧ್ಯಮ ವಾಹಿನಿಗಳು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವೇಳೆ ಈ ಪ್ರಾಣಿಯನ್ನು ಸೆರೆ ಹಿಡಿದಿದ್ದವು, ಇದೊಂದು ಕಾಡುಪ್ರಾಣಿ ಇರಬಹುದು ಎಂದು ಅವರೆಲ್ಲ ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸಮಾರಂಭದ ವೇಳೆ ಅಲ್ಲಿ ಕಾಡುಪ್ರಾಣಿಗಳು ನುಗ್ಗುವುದು ಅಸಾಧ್ಯ. ಇಂತಹ ಆಧಾರ ರಹಿತ ವದಂತಿಗಳನ್ನು ನಂಬಬೇಡಿ ಎಂದು ದೆಹಲಿ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ನಲ್ಲಿ ಮನವಿ ಮಾಡಿದ್ದಾರೆ.