ನವದೆಹಲಿ: ಯಮುನಾ ನದಿ ತೀರದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ಆದೇಶಿಸಿದೆ. ಯಮುನಾ ನದಿಯ ದಡ, ನದಿ ಪಾತ್ರ ಮತ್ತು ನದಿಗೆ ಹರಿಯುವ ಚರಂಡಿಗಳಲ್ಲಿನ ಎಲ್ಲಾ ಅತಿಕ್ರಮಣಗಳು ಮತ್ತು ಅಕ್ರಮ ನಿರ್ಮಾಣವನ್ನು ತೆಗೆದುಹಾಕುವಂತೆ ಡಿಡಿಎ ಉಪಾಧ್ಯಕ್ಷರಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಹನ್ ನೇತೃತ್ವದ ನ್ಯಾಯಪೀಠವು ನಿರ್ದೇಶನ ನೀಡಿತು.
"ಅವರನ್ನು (ಡಿಡಿಎ ಉಪಾಧ್ಯಕ್ಷರು) ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಮತ್ತು ಎಂಸಿಡಿ, ದೆಹಲಿ ಪೊಲೀಸ್, ಡಿಎಂಆರ್ಸಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ, ಪಿಡಬ್ಲ್ಯೂಡಿ, ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಸಮನ್ವಯತೆಯಿಂದ ಕೆಲಸ ಮಾಡಲಿದ್ದಾರೆ. ಡಿಡಿಎ ಉಪಾಧ್ಯಕ್ಷರು ಒಂದು ವಾರದೊಳಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಭೆಯನ್ನು ಕರೆಯಬೇಕು" ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.
ಶಾಹೀನ್ ಬಾಗ್ ಪ್ರದೇಶದಲ್ಲಿನ ಎಲ್ಲಾ ಅನಧಿಕೃತ ನಿರ್ಮಾಣಗಳನ್ನು ನೆಲಸಮಗೊಳಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ನದಿ ತೀರ ಮತ್ತು ಪ್ರವಾಹ ಪ್ರದೇಶಗಳಲ್ಲಿ ಅಕ್ರಮ ನಿರ್ಮಾಣವನ್ನು ತಡೆಯಲು ನಿರ್ದೇಶನ ನೀಡುವಂತೆ ವಕೀಲ ಸುಮಿತ್ ಕುಮಾರ್ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.