ಕರ್ನಾಟಕ

karnataka

ETV Bharat / bharat

'ಆಪ್​'​ನ ಮದ್ಯ ನೀತಿಯಿಂದಾಗಿ ದೆಹಲಿ ಸರ್ಕಾರಕ್ಕೆ 2,000 ಕೋಟಿ ರೂಪಾಯಿ ನಷ್ಟ: ಸಿಎಜಿ ವರದಿ - CAG REPORT ON DELHI EXCISE POLICY

ಹಿಂದಿನ ಆಪ್​ ಸರ್ಕಾರದ ಆಡಳಿತದಲ್ಲಿ ರೂಪಿಸಿ ರದ್ದಾಗಿರುವ ಮದ್ಯ ನೀತಿಯಿಂದಾಗಿ 2 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರ ಇಂದು ಮಂಡಿಸಿರುವ ಸಿಎಜಿ ವರದಿಯಲ್ಲಿದೆ.

ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​
ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ (ETV Bharat)

By ETV Bharat Karnataka Team

Published : Feb 25, 2025, 7:10 PM IST

ನವದೆಹಲಿ:ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ನೇತೃತ್ವದ ಸರ್ಕಾರ ರೂಪಿಸಿದ್ದ 'ಮದ್ಯ ನೀತಿ' ಕುರಿತ ಸಿಎಜಿ ವರದಿಯನ್ನು ನೂತನ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಇಂದು(ಮಂಗಳವಾರ) ಮಂಡಿಸಿತು. 2021-2022ರ ಹೊಸ ಅಬಕಾರಿ ನೀತಿಯಿಂದಾಗಿ ದೆಹಲಿ ಸರ್ಕಾರಕ್ಕೆ 2 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಅಂಶ ಅದರಲ್ಲಿದೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಆಪ್​ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತಾದ 14 ಸಿಎಜಿ ವರದಿಗಳನ್ನು ಮಂಡಿಸಲಾಗುವುದು ಎಂದು ಬಿಜೆಪಿ ಹೇಳಿತ್ತು. ಅದರಲ್ಲಿ ಮೊದಲ ವರದಿಯನ್ನು ವಿಶೇಷ ಅಧಿವೇಶನದ ಮೊದಲ ದಿನವೇ ಮಂಡಿಸಿದೆ.

ಸಿಎಜಿ ವರದಿಯ ಅಂಶಗಳಿವು:

  • ಹಿಂದಿನ ಆಪ್​ ಸರ್ಕಾರದ ಹೊಸ ಅಬಕಾರಿ ನೀತಿಯು ದುರ್ಬಲವಾಗಿತ್ತು. ಮದ್ಯ ಸರಬರಾಜಿಗೆ ನೀಡುವ ಪರವಾನಗಿಯಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈಗ ರದ್ದಾಗಿರುವ ಅಬಕಾರಿ ನೀತಿ ಪರಿಷ್ಕರಣೆ ಮಾಡಲು ತಜ್ಞರ ಸಮಿತಿಯ ಶಿಫಾರಸುಗಳನ್ನು ಅಂದಿನ ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ನಿರಾಕರಿಸಿದ್ದರು.
  • ಚುನಾವಣೆಗೆ ಮುನ್ನ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮದ್ಯ ಹಗರಣದ ವರದಿಯು, ಅಸ್ತಿತ್ವದಲ್ಲಿ ಇಲ್ಲದ ಪುರಸಭೆಯ ವಾರ್ಡ್‌ಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರದ ನಿಯಮಾನುಸಾರ ಅನುಮತಿ ಪಡೆಯಲಾಗಿಲ್ಲ. ಇದರಿಂದ ಬೊಕ್ಕಸಕ್ಕೆ 941.53 ಕೋಟಿ ರೂಪಾಯಿಗಳ ಆದಾಯ ಖೋತಾ ಆಗಿದೆ.
  • ದೆಹಲಿಯ ಹಲವು ಪ್ರದೇಶಗಳಲ್ಲಿ ಆರಂಭಿಸಲಾದ ಮದ್ಯದಂಗಡಿಗಳಿಗೆ ಮಾನದಂಡ ಪಾಲಿಸಲಾಗಿಲ್ಲ. ಇದರಿಂದ ಪರವಾನಗಿ ಶುಲ್ಕ, ಮರುಟೆಂಡರ್​​ನಿಂದ ಬರುವ ಆದಾಯ ಸೇರಿ ಅಬಕಾರಿ ಇಲಾಖೆಗೆ ಸುಮಾರು 890.15 ಕೋಟಿ ರೂ.ಗಳ ನಷ್ಟವಾಗಿದೆ.

ಕೋಟ್ಯಂತರ ರೂಪಾಯಿ ಮನ್ನಾ:

  • ಕೋವಿಡ್ ಸಾಂಕ್ರಾಮಿಕದ ವೇಳೆ ಮದ್ಯದಂಗಡಿಗಳು ಬಂದ್​ ಆಗಿದ್ದರಿಂದ ವ್ಯವಹಾರ ನಷ್ಟಕ್ಕೆ ಪರವಾನಗಿದಾರರು ಸರ್ಕಾರಕ್ಕೆ ನೀಡಬೇಕಾಗಿದ್ದ ಹಣವನ್ನು ಬೇಕಾಬಿಟ್ಟಿ ಮನ್ನಾ ಮಾಡಲಾಗಿದೆ. ಇದರಿಂದ 144 ಕೋಟಿ ರೂ.ಗಳಷ್ಟು ಆದಾಯ ನಷ್ಟವಾಗಿದೆ.
  • ಮಾಸ್ಟರ್ ಪ್ಲಾನ್ ದೆಹಲಿ-2021 ನಿಯಮಗಳ ಪ್ರಕಾರ, ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯದಂಗಡಿ ತೆರೆಯಲು ನಿಷೇಧವಿದೆ. ಆದರೆ, ಆಪ್​​ನ ಅಬಕಾರಿ ನೀತಿಯು ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಎರಡು ಮಳಿಗೆಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಿತ್ತು. ಒಂದು ಅಂಗಡಿ ಇದ್ದಲ್ಲಿ ಅದೇ ಪ್ರದೇಶದಲ್ಲಿ ಇನ್ನೊಂದು ಮಳಿಗೆ ಆರಂಭಿಸಲು ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಆದರೆ, ಇದನ್ನು ಪಾಲಿಸಲಾಗಿಲ್ಲ.
  • ನಿಯಮಬಾಹಿರವಾಗಿ ಎಲ್ಲೆಂದರಲ್ಲಿ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಸೂಚಿಸಿತು. ಇದರಿಂದ 67 ಕಡೆಗಳಲ್ಲಿ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದವರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದರು. ವಿಚಾರಣೆ ನಡೆಸಿದ ಕೋರ್ಟ್​ ಮಳಿಗೆ ಆರಂಭಕ್ಕೆ ನೀಡಬೇಕಿರುವ ಪರವಾನಗಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಿತು. ಸರ್ಕಾರದ ಲೋಪದಿಂದಾಗಿ ತಿಂಗಳಿಗೆ 114.50 ಕೋಟಿ ಪರವಾನಗಿ ಶುಲ್ಕ ನಷ್ಟವಾಯಿತು. ಈ ವಿನಾಯಿತಿಯಿಂದಾಗಿ ಸುಮಾರು 941.53 ಕೋಟಿ ರೂ.ಗಳ ಖೋತಾ ಆಗಿದೆ.

ಅವಧಿಗೂ ಮೊದಲೇ ಪರವಾನಗಿ ವಾಪಸ್​:

  • 2022ರಲ್ಲಿ ಮದ್ಯದಂಗಡಿಗಳಿಗೆ ನೀಡಿದ ಪರವಾನಗಿಯನ್ನು 19 ಕಡೆ ಅವಧಿಗೂ ಮೊದಲೇ ಸರ್ಕಾರಕ್ಕೆ ವಾಪಸ್​ ನೀಡಲಾಗಿದೆ. ಇವನ್ನು ಆರಂಭಿಸಲು ಸರ್ಕಾರ ಮರು ಟೆಂಡರ್​ ಕರೆದಿಲ್ಲ. ಇದರಿಂದ ಪರವಾನಗಿ ಶುಲ್ಕ ಮತ್ತು ಚಿಲ್ಲರೆ ಮಾರಾಟ ಸ್ಥಗಿತದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದಿದೆ.
  • ಪರವಾನಗಿದಾರರಿಂದ ಭದ್ರತಾ ಠೇವಣಿಗಳನ್ನು ತಪ್ಪಾಗಿ ಸಂಗ್ರಹಿಸಿದ್ದರಿಂದಲೂ 27 ಕೋಟಿ ರೂಪಾಯಿ ನಷ್ಟವಾಗಿದೆ. ಆಗಿನ ಉಪ ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ನೇತೃತ್ವದ ಸಚಿವರ ಸಮಿತಿ (GoM) ಅಬಕಾರಿ ನೀತಿಯ ಕುರಿತು ರಚಿಸಲಾದ ತಜ್ಞರ ಸಮಿತಿಯ ಶಿಫಾರಸುಗಳನ್ನೂ ಪರಿಗಣಿಸಿಲ್ಲ. ಕೋವಿಡ್​​ ವೇಳೆ ಪರವಾನಗಿ ಶುಲ್ಕ ಮನ್ನಾ ಮಾಡಿದ್ದರಿಂದಲೂ ಭಾರೀ ನಷ್ಟವಾಗಿದೆ.
  • ದುರ್ಬಲ ನೀತಿ, ಅನುಷ್ಠಾನದ ಕೊರತೆಯಿಂದಾಗಿ ದೆಹಲಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಸುಮಾರು 2,002.68 ಕೋಟಿಗಳ ಸಂಚಿತ ನಷ್ಟ ಸಂಭವಿಸಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ಆಪ್​​ ನಾಯಕರ ಜೈಲುವಾಸ:ಅಬಕಾರಿ ನೀತಿಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಬಿಜೆಪಿ ಆರೋಪಿಸಿದ ಬಳಿಕ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಪ್ರಕರಣದ ತನಿಖೆಯಲ್ಲಿ ಸಿಬಿಐಗೆ ವಹಿಸಿದರು. ತನಿಖಾ ಸಂಸ್ಥೆಗಳು ಅರವಿಂದ್ ಕೇಜ್ರಿವಾಲ್, ಮನೀಶ್​ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಆಪ್​ನ ಹಲವು ನಾಯಕರನ್ನು ತಪ್ಪಿತಸ್ಥರು ಎಂದು ಗುರುತಿಸಿ ಜೈಲಿಗೆ ಕಳುಹಿಸಿತ್ತು.

ಇದನ್ನೂ ಓದಿ:ಮಧ್ಯ ಪ್ರದೇಶದಲ್ಲಿ ಹೊಸ ಮದ್ಯ ನೀತಿ: ಕಡಿಮೆ ಆಲ್ಕೋಹಾಲ್‌ಯುಕ್ತ ಬಾರ್‌ಗಳನ್ನು ತೆರೆಯಲು ನಿರ್ಧಾರ

ದೆಹಲಿ ಮದ್ಯ ನೀತಿ ಹಗರಣವೇ ಎಎಪಿ ಹಿನ್ನಡೆಗೆ ಕಾರಣ; ಅಣ್ಣಾ ಹಜಾರೆ ಆಕ್ರೋಶ

ABOUT THE AUTHOR

...view details