ಕರ್ನಾಟಕ

karnataka

ETV Bharat / bharat

ಕೇಜ್ರಿವಾಲ್ ಬಂಧನ ಎತ್ತಿಹಿಡಿದ ದೆಹಲಿ ಹೈಕೋರ್ಟ್, ಜಾಮೀನು ಅರ್ಜಿ ವಜಾ - Delhi Excise case - DELHI EXCISE CASE

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಸಿಬಿಐ ಬಂಧನ ಮುಂದುವರಿಯಲಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್​ ವಜಾ ಮಾಡಿತು.

ಸಿಬಿಐನಿಂದ ಕೇಜ್ರಿವಾಲ್ ಬಂಧನ
ಅರವಿಂದ್ ಕೇಜ್ರಿವಾಲ್ (ETV Bharat)

By PTI

Published : Aug 5, 2024, 6:01 PM IST

ನವದೆಹಲಿ:ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ತಮ್ಮನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ್ದನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ಸೋಮವಾರ ವಜಾಗೊಳಿಸಿದೆ. ಜೊತೆಗೆ, ಸಿಬಿಐ ಬಂಧನವನ್ನು ಕೋರ್ಟ್​ ಎತ್ತಿಹಿಡಿದಿದೆ. ಇದು ಆಪ್​ ನಾಯಕನಿಗೆ ಭಾರೀ ಹಿನ್ನಡೆ ಉಂಟುಮಾಡಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ, ಅರವಿಂದ್​ ಕೇಜ್ರಿವಾಲ್​ ಅವರನ್ನು ಸಿಬಿಐ ಕಾರಣವಿಲ್ಲದೆ ಬಂಧಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಎಎಪಿ ರಾಷ್ಟ್ರೀಯ ಸಂಚಾಲಕರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗುವುದು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎಂದು ಸೂಚಿಸಿದರು.

ಸಿಬಿಐ ಬಂಧನ ಪ್ರಶ್ನಿಸಿ ಕೇಜ್ರಿವಾಲ್​ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜುಲೈ 17ರಂದು ಹೈಕೋರ್ಟ್ ಕಾಯ್ದಿರಿಸಿತ್ತು. ಜೊತೆಗೆ ಜಾಮೀನು ಅರ್ಜಿಯನ್ನು ಜುಲೈ 29ರಂದು ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿತ್ತು. ಇದೀಗ ಎರಡೂ ಅರ್ಜಿಗಳ ಆದೇಶವನ್ನು ಕೋರ್ಟ್​ ಪ್ರಕಟಿಸಿತು.

ಸಿಬಿಐ ವಾದವೇನು?:ಕೇಜ್ರಿವಾಲ್​ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎನ್ನಲು ಪುರಾವೆಗಳಿವೆ. ಅವರ ಬಂಧನವಿಲ್ಲದೆ ತನಿಖೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ವಿಚಾರಣಾ ನ್ಯಾಯಾಲಯಕ್ಕೆ ಈ ಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದೇವೆ. ಸಿಎಂ ಬಂಧನದ ಬಳಿಕ ಹಲವು ಸಾಕ್ಷ್ಯಗಳು ಸಿಕ್ಕಿವೆ. ಅಂತಿಮ ಆರೋಪಪಟ್ಟಿಯು ವಿಚಾರಣಾ ನ್ಯಾಯಾಲಯದಲ್ಲಿದೆ ಎಂದು ಸಿಬಿಐ ಕೋರ್ಟ್​ ಮುಂದೆ ವಾದಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೊಳಗಾಗಿದ್ದ ಮುಖ್ಯಮಂತ್ರಿಗೆ ವಿಚಾರಣಾ ನ್ಯಾಯಾಲಯ ಜೂನ್ 20ರಂದು ಜಾಮೀನು ನೀಡಿತ್ತು. ಆದರೆ, ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರ ಬೆನ್ನಲ್ಲೇ, ಕೇಜ್ರಿವಾಲ್ ಅವರನ್ನು ಜೂನ್ 26ರಂದು ತಿಹಾರ್ ಜೈಲಿನಲ್ಲಿ ಸಿಬಿಐ ಬಂಧಿಸಿ ತನ್ನ ವಶಕ್ಕೆ ಪಡೆದಿದೆ. ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಅವರ ಬಂಧನದ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶಿಸಿತ್ತು. ಸಿಬಿಐ ತನಿಖೆ ನಡೆಸುತ್ತಿರುವ ಕೇಸ್​ನಲ್ಲಿ ಆಗಸ್ಟ್​ 8ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶಿಸಿತ್ತು.

ಸುಪ್ರೀಂ ಕೋರ್ಟ್​ನಲ್ಲಿ ಸವಾಲು:ಕೇಜ್ರಿವಾಲ್​ ಅವರನ್ನು ಸಿಬಿಐ ಬಂಧಿಸಿದ್ದನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್​ ಆದೇಶದ ವಿರುದ್ಧ ಸುಪ್ರೀಂಕೋರ್ಟ್​ ಮೊರೆ ಹೋಗಲಾಗುವುದು ಎಂದು ಆಮ್​ ಆದ್ಮಿ ಪಕ್ಷ (ಆಪ್​) ತಿಳಿಸಿದೆ. ದೆಹಲಿ ಕೋರ್ಟ್​ ಯಾವುದೇ ಸಮರ್ಥನೀಯ ಕಾರಣ ಇಲ್ಲದೇ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ. ಇದನ್ನು ಉನ್ನತ ಹಂತದ ಕೋರ್ಟ್​ನಲ್ಲಿ ಸವಾಲು ಮಾಡಲಾಗುವುದು ಎಂದಿದೆ.

ಇದನ್ನೂ ಓದಿ:ದೆಹಲಿ ಮದ್ಯ ನೀತಿ ಹಗರಣ: ಕೇಜ್ರಿವಾಲ್, ಸಿಸೋಡಿಯಾ, ಕವಿತಾರ ನ್ಯಾಯಾಂಗ ಬಂಧನ ವಿಸ್ತರಣೆ - Delhi Liquor Policy Scam

ABOUT THE AUTHOR

...view details