ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾಗಶಃ ಹೊರಬಿದ್ದಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್ ಸೋಲು ಅನುಭವಿಸಿದ್ದಾರೆ. 70 ಸ್ಥಾನಗಳಲ್ಲಿ ಬಿಜೆಪಿ ಈಗಾಗಲೇ 47ರಲ್ಲಿ ಗೆದ್ದು ಪೂರ್ಣ ಬಹುಮತ ಪಡೆದಿದೆ. ಆಪ್ 21ರಲ್ಲಿ ಜಯಿಸಿ ಅಧಿಕಾರಿ ಕಳೆದುಕೊಂಡಿದೆ.
ಜಿದ್ದಾ ಜಿದ್ದಿನ ಕದನದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ 3 ಸಾವಿರ ಮತಗಳಿಂದ ಪರಾಜಯಗೊಂಡರೆ, ಜಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮನೀಶ್ ಸಿಸೋಡಿಯಾ ಬಿಜೆಪಿ ಅಭ್ಯರ್ಥಿ ತರವಿಂದರ್ ಸಿಂಗ್ ಮಾರ್ವಾ ವಿರುದ್ಧ 675 ಮತಗಳಿಂದ ಸೋಲು ಅನುಭವಿಸಿದ್ದಾರೆ. ಇನ್ನು ಶಾಕುರ್ ಬಸ್ತಿ ಕ್ಷೇತ್ರದಲ್ಲಿ ಆಪ್ನ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರು ಬಿಜೆಪಿಯ ಕರ್ನೆಲ್ ಸಿಂಗ್ ವಿರುದ್ಧ 20998 ಮತಗಳ ಅಂತರದಿಂದ ಸೋತಿದ್ದಾರೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಸೋಲು ಎಎಪಿಗೆ ಭಾರೀ ಮುಖಭಂಗವಾಗಿದೆ.
ಕೇಜ್ರಿವಾಲ್ 4ನೇ ಭಾರಿಗೆ ಚುನಾವಣೆಗೆ ಸ್ಫರ್ಧಿಸಿದ್ದರು. 3 ಸಲ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದ ಇವರು ಈ ಸಲ ಪರಾಭವಗೊಂಡಿದ್ದಾರೆ. ಬಿಜೆಪಿಗೆ ಬಹುಮತ ಬಂದರೆ ಇಡೀ ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ದಿಲ್ಲಿಯ ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಸಿಎಂ ಅಭ್ಯರ್ಥಿ ಆಗುವಲ್ಲಿ ಮುಂದಿದ್ದಾರೆಂದು ವಿಶ್ಲೇಷಕರು ಅಂದಾಜಿಸಿದ್ದಾರೆ.