ಬೇಗುಸರಾಯ್ (ಬಿಹಾರ):ದೇಶಾದ್ಯಂತ 2024ರ ಲೋಕಸಭೆ ಚುನಾವಣೆಗೆ ಸಿದ್ಧತೆಗಳು ವೇಗ ಪಡೆದುಕೊಂಡಿವೆ. ಆದರೆ, ಲೋಕಸಭೆ ಅಥವಾ ವಿಧಾನಸಭೆ ಯಾವುದೇ ಚುನಾವಣೆಯಾದರೂ ಪ್ರತಿ ಬಾರಿಯೂ ಬಿಹಾರದ ಬೇಗುಸರಾಯ್‌ನಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತದೆ.
ಹೌದು, ಮೊದಲ ಬಾರಿಗೆ ಮತಗಟ್ಟೆ ವಶಪಡಿಸಿಕೊಂಡ ಸಂದರ್ಭ ಅದು. ಇದು 66 ವರ್ಷಗಳ ಹಿಂದೆ, ಅಂದರೆ 1957ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಡೆದ ಘಟನೆ. ಇದೊಂದು ಭಾರತೀಯ ಪ್ರಜಾಪ್ರಭುತ್ವದಲ್ಲಿ ಕರಾಳ ಅಧ್ಯಾಯವಾಗಿಯೇ ಉಳಿದಿದೆ. ಆಗ ಬೇಗುಸರಾಯ್‌ನಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಪ್ರಬಲವಾಗಿದ್ದವು. 1952ರ ಮೊದಲ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬೇಗುಸರಾಯ್ ವಿಧಾನಸಭಾ ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಂಡಿತು. 1956ರಲ್ಲಿ ಕಾಂಗ್ರೆಸ್ ಶಾಸಕರ ನಿಧನದ ನಂತರ ಉಪಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಚಂದ್ರಶೇಖರ್ ಸಿಂಗ್ ಗೆದ್ದಿದ್ದರು.
1957ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಸರಯುಗ್ ಸಿಂಗ್ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣದಲ್ಲಿದ್ದರೆ, ಕಮ್ಯುನಿಸ್ಟ್ ಪಕ್ಷದ ಚಂದ್ರಶೇಖರ್ ಪ್ರಸಾದ್ ಸಿಂಗ್ ಮರು ಆಯ್ಕೆ ಬಯಸಿದ್ದರು. ಇಬ್ಬರೂ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದರು.
ಚುನಾವಣೆಗಾಗಿ ಬೇಗುಸರಾಯ್ನಿಂದ ಕೇವಲ 6 ಕಿಲೋಮೀಟರ್ ದೂರದಲ್ಲಿರುವ ರಾಚಿಯಾಹಿ ಮತಗಟ್ಟೆಯನ್ನು ನಿರ್ಮಿಸಲಾಗಿತ್ತು. ಮೂರು ಗ್ರಾಮಗಳ ಜನರು ಈ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದರು. ಮತದಾನದ ದಿನದಂದು ರಚಿಯಾಹಿ, ಮಚ್ಚಾ, ರಾಜಾಪುರ ಮತ್ತು ಆಕಾಶಪುರ ಗ್ರಾಮಗಳ ಜನರು ಮತದಾನ ಮಾಡಲು ಬರುತ್ತಿದ್ದಾಗ ಏಕಾಏಕಿ 20 ಜನರು ಆಯುಧಗಳೊಂದಿಗೆ ರಾಜಾಪುರ ಮತ್ತು ಮಚ್ಚಾ ಗ್ರಾಮಗಳ ಮತದಾರರ ಮೇಲೆ ದಾಳಿ ಮಾಡಿದ್ದರು.