ಹರಿದ್ವಾರ: ಕಾರ್ತಿಕ ಪೂರ್ಣಿಮೆಯ ದಿನ ಭಕ್ತರು ಪವಿತ್ರ ನದಿಯಲ್ಲಿ ಸ್ನಾನ, ಪೂಜೆ ಮತ್ತು ದಾನವನ್ನು ಮಾಡುವುದು ಹಿಂದಿನಿಂದಲೂ ರೂಢಿಸಿಕೊಂಡ ಬಂದ ಸಂಪ್ರದಾಯ. ಇಂದು ಕಾರ್ತಿಕ ಪೂರ್ಣಿಮೆಯಾಗಿದ್ದರಿಂದ 25 ಲಕ್ಷ ಭಕ್ತರು ಹರಿದ್ವಾರದಲ್ಲಿ ಪವಿತ್ರ ಗಂಗಾಸ್ನಾನ ಮಾಡಿ ಪುನೀತರಾದರು. ದೇವ್ ದೀಪಾವಳಿ ಎಂದೂ ಆಚರಿಸಲಾಗುವ ಈ ದಿನದಂದು ದೂರದೂರುಗಳಿಂದ ಅನೇಕ ಭಕ್ತರು ಇಲ್ಲಿಗೆ ಬಂದಿದ್ದರು. ಹರ್ಕಿ ಪೈಡಿ ಸೇರಿದಂತೆ ವಿವಿಧ ಘಾಟ್‌ಗಳಲ್ಲಿ ಸ್ನಾನ ಮಾಡಿ ಪುನೀತರಾದರು. ಅಲ್ಲದೇ ಇದೇ ವೇಳೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹಾಗೂ ತಮ್ಮ ಪಾಪಗಳಿಗೆ ಪರಿಹಾರ ನೀಡುವಂತೆ ಪ್ರಾರ್ಥನೆ ಮಾಡಿಕೊಂಡರು.
ಇಲ್ಲಿ ಸ್ನಾನ ಮಾಡುವುದರಿಂದ ತಮ್ಮ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಉಂಟು. ಗಂಗಾ ಸ್ನಾನಂ ತುಂಗಾ ಪಾನಂ ಎಂಬಂತೆ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತವೆ ಎಂದು ಶಾಸ್ತ್ರ ಮತ್ತು ಪುರಾಣಗಳಲ್ಲಿಯೂ ಹೇಳಲಾಗಿದೆ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಪವಿತ್ರ ಗಂಗಾಸ್ನಾನ ಮಾಡಿದ ಭಕ್ತರು, ಕುಟುಂಬದಲ್ಲಿ ಸುಖ - ಸಮೃದ್ಧಿ ನೆಲೆಸಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಕಾರ್ತಿಕ ಪೂರ್ಣಿಮೆಯಂದು ಗಂಗೆಯಲ್ಲಿ ಸ್ನಾನ ಮಾಡಿ ಪೂಜಿಸುವುದರಿಂದ ವ್ಯಕ್ತಿಯ ಎಲ್ಲ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದ್ದು, ಸ್ನಾನ ಮಾಡಿ ದೀಪವನ್ನು ದಾನ ಮಾಡುವವನು ದೇವರಂತೆ ಆಗುತ್ತಾನೆ, ವ್ಯಕ್ತಿಗೆ ಖ್ಯಾತಿ ಬರುವುದು ಮತ್ತು ಸಮೃದ್ಧಿ ಹೆಚ್ಚಾಗುವುದು ಸೇರಿದಂತೆ ಸುಖಿ ಜೀವನ ನಡೆಸುತ್ತಾನೆ ಎಂಬ ಪ್ರತೀತಿ ಕೂಡ ಇದೆ. ಅಲ್ಲದೇ ಸ್ನಾನ ಬಳಿಕ ತುಳಸಿ ಎಲೆ ಮತ್ತು ಬೆಳ್ಳಿಯ ಪಾತ್ರೆಗಳನ್ನು ದಾನ ಮಾಡುವುದರಿಂದ ಅಪಾರ ಪುಣ್ಯ ಕೂಡ ಸಿಗುತ್ತದೆ. ಹೀಗೆ ದೀಪವನ್ನು ದಾನ ಮಾಡುವುದರಿಂದ ವ್ಯಕ್ತಿಯ ಪಾಪಗಳು ನಾಶವಾಗುತ್ತವೆ ಮತ್ತು ಅಶ್ವಮೇಧ ಯಾಗದಂತೆಯೇ ಫಲವನ್ನು ಪಡೆಯುತ್ತಾನೆ ಹಾಗೂ ಜೀವನದಲ್ಲಿ ನಡೆಯುವ ಯಾವುದೇ ರೀತಿಯ ತೊಂದರೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂಬ ಬಲವಾದ ನಂಬಿಕೆಗಳು ಇವೆ.
ವಿಶೇಷ ಪೊಲೀಸ್ ಭದ್ರತಾ ವ್ಯವಸ್ಥೆಯಲ್ಲಿ ಪುಣ್ಯ ಸ್ನಾನ ನಡೆಯಿತು. 9 ವಲಯಗಳು ಮತ್ತು 33 ಸೆಕ್ಟರ್‌ಗಳಾಗಿ ವಿಂಗಡಿಸಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಜತೆಗೆ ಸಂಚಾರಕ್ಕೆ ಸಂಬಂಧಿಸಿದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕಾರ್ತಿಕ ಪೂರ್ಣಿಮಾ ಸ್ನಾನಕ್ಕಾಗಿ ಹರಿದ್ವಾರ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಎಸ್ಪಿ ಕ್ರೈಮ್ ಪಂಕಜ್ ಗೈರೋಲಾ ಮಾಹಿತಿ ನೀಡಿದರು.
ಇದನ್ನೂ ಓದಿ: ವರ್ಷದಲ್ಲಿ ಒಂದು ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವ ದೇವಸ್ಥಾನ: ಎಲ್ಲಿದೆ ಗೊತ್ತಾ?