ಅಗರ್ತಲಾ (ಮಿಜೋರಾಂ): ಪಶ್ಚಿಮ ಬಂಗಾಳದಲ್ಲಿ ಅನಾಹುತ ಸೃಷ್ಟಿಸಿದ್ದ ರೆಮಲ್ ಚಂಡಮಾರುತ ಈಶಾನ್ಯ ರಾಜ್ಯಗಳಲ್ಲಿ ಭಾರಿ ಪರಿಣಾಮ ಬೀರಿದೆ. ಚಂಡಮಾರುತದ ಪ್ರಭಾವದಿಂದಾಗಿ ಮಿಜೋರಾಂನಲ್ಲಿ ವಿವಿಧ ಅಪಘಾತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ಏರಿದೆ. ಐಜ್ವಾಲ್‌ನ ಉಪನಗರದಲ್ಲಿ ಭಾರೀ ಮಳೆಯಿಂದಾಗಿ ಕಲ್ಲು ಕ್ವಾರಿ ಕುಸಿದು ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ. 8 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಐಜೋಲ್ ಬಳಿಯ ಹ್ಲಿಮೆನ್ನಲ್ಲಿ ಭೂಕುಸಿತದಿಂದಾಗಿ ಹಲವಾರು ಮನೆಗಳು ಕುಸಿದಿವೆ. ಈ ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ.
ರೂ. 4 ಲಕ್ಷ ಪರಿಹಾರ ಪ್ರಕಟಿಸಿದ ಸಿಎಂ: ಮಿಜೋರಾಂನಲ್ಲಿ ಇಂದು ಕೂಡ ಹಲವು ಸ್ಥಳಗಳಲ್ಲಿ ಮಳೆಯಾಗಲಿದೆ. ಗುಡುಗು ಮತ್ತು ಮಿಂಚು ಸಹಿತ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಿಸಿದೆ. ಕಲ್ಲು ಕ್ವಾರಿ ಕುಸಿತ ಮತ್ತು ಮಳೆಯಿಂದ ಉಂಟಾದ ಅನಾಹುತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಲಾಲ್ದುಹೋಮ ₹ 4 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ರಾಜ್ಯ ವಿಪತ್ತು ಪರಿಹಾರ ನಿಧಿಗೆ ರೂ.15 ಕೋಟಿ ನೀಡುವುದಾಗಿ ಅವರು ಘೋಷಿಸಿದ್ದಾರೆ.
ಸಿಎಂ ಲಾಲ್ದುಹೋಮ ಅವರು ಪರಿಸ್ಥಿತಿ ಅವಲೋಕಿಸಲು ಉನ್ನತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಭಾರೀ ಮಳೆಯ ಹಿನ್ನೆಲೆ ಮಿಜೋರಾಂನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತುರ್ತು ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಎಲ್ಲಾ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂದು ಮಿಜೋರಾಂ ಸರ್ಕಾರ ಆದೇಶಿಸಿದೆ. ರೆಮಲ್ ಚಂಡಮಾರುತದ ಪ್ರಭಾವದಿಂದಾಗಿ ಮಿಜೋರಾಂನಲ್ಲಿ ಸುಮಾರು 150 ಮನೆಗಳು ನಾಶವಾಗಿವೆ. ಹತ್ತಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಅಸ್ಸೋಂನಲ್ಲಿ ನಾಲ್ವರು ಸಾವು: ರೆಮಲ್ ಚಂಡಮಾರುತದ ಪ್ರಭಾವದಿಂದ ಅಸ್ಸೋಂನಲ್ಲಿಯೂ ಭಾರೀ ಮಳೆಯಾಗುತ್ತಿದೆ. ಅಸ್ಸೋಂನಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ. ಕಮ್ರೂಪ್ ಜಿಲ್ಲೆಯಲ್ಲಿ ಮರ ಬಿದ್ದು 60 ವರ್ಷದ ಲಾಬನ್ಯಾ ಕುಮಾರಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಉಳಿದಂತೆ ಮರ ಬಿದ್ದು ಬಾಲಕನೊಬ್ಬ ಅಸುನೀಗಿದ್ದು, ಆತನ ತಂದೆ ಗಾಯಗೊಂಡಿದ್ದಾರೆ.
ಒಡಿಶಾಗೆ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದ ಅಸ್ಸೋಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಈ ಕೆಟ್ಟ ವಾತಾವರಣ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದರು. ಗಂಟೆಗೆ 15 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ ಈಶಾನ್ಯ ದಿಕ್ಕಿಗೆ ಚಲಿಸುತ್ತಿದ್ದು, ಮಂಗಳವಾರ ರಾತ್ರಿ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಎಲ್ಲಾ ಜನರು ಮನೆಯಲ್ಲಿಯೇ ಇರಲು ಮತ್ತು ತುರ್ತು ಕೆಲಸಗಳಿಗಾಗಿ ಮಾತ್ರ ಹೊರಗೆ ಬರಲು ಸೂಚಿಸಲಾಗಿದೆ.