Live Threat Detection: ಗೂಗಲ್ ಹೊರ ತರುತ್ತಿರುವ ಹೊಚ್ಚ ಹೊಸ ಫೀಚರ್ ಬಳಕೆದಾರರಿಗೆ ಬಹಳ ಅನುಕೂಲವಾಗಲಿದೆ. ಇದಕ್ಕೆ 'ಲೈವ್ ಥ್ರೆಟ್ ಡಿಟೆಕ್ಷನ್' ಎಂದು ಹೆಸರಿಡಲಾಗಿದೆ. ಈ ಫೀಚರ್ ಬ್ಯಾಕ್ಗ್ರೌಂಡ್ನಲ್ಲಿ ಕೆಲಸ ಮಾಡುತ್ತಲೇ ನಿಮ್ಮ ಸಿಸ್ಟಮ್ ಅಥವಾ ಸಾಧನದಲ್ಲಿ ಯಾವುದೇ ಮಾಲ್ವೇರ್ ಪತ್ತೆಯಾದರೆ ರಿಯಲ್ ಟೈಂನಲ್ಲಿ ಎಚ್ಚರಿಕೆ ನೀಡುತ್ತದೆ.
ನಿಮ್ಮ ಸಾಧನ ಅಥವಾ ಸ್ಮಾರ್ಟ್ಫೋನ್ಗಳಲ್ಲಿ ವೈರಸ್ ಅಥವಾ ಮಾಲ್ವೇರ್ ಆ್ಯಕ್ಟಿವಿಟಿಯನ್ನು ಕಂಡುಹಿಡಿಯುವುದಕ್ಕೆ ಸಹಾಯ ಮಾಡಲು ಗೂಗಲ್ ಇದನ್ನು ಹೊರತರುತ್ತಿದೆ. ಸದ್ಯ ಲೈವ್ ಥ್ರೆಟ್ ಡಿಟೆಕ್ಷನ್ ಫೀಚರ್ ಪಿಕ್ಸೆಲ್ 6 ಮತ್ತು ಅದರ ಲೈನ್ಅಪ್ ಮಾಡೆಲ್ಗಳಲ್ಲಿ ಲಭ್ಯ. ಮುಂದಿನ ತಿಂಗಳಲ್ಲಿ ಒನ್‌ಪ್ಲಸ್, ಸ್ಯಾಮ್‌ಸಂಗ್, ಒಪ್ಪೋ ಮತ್ತು ಇತರ ಸ್ಮಾರ್ಟ್ಫೋನ್ಗಳಿಗೂ ದೊರೆಯಲಿದೆ ಎಂದು ಗೂಗಲ್ ಹೇಳಿದೆ.
ಮಾಲ್ವೇರ್ ಮತ್ತು ಅನ್ಸೇಫ್ ಆ್ಯಪ್ಗಳಿಂದ ರಿಯಲ್ ಟೈಂನಲ್ಲಿ ನಿಮ್ಮನ್ನು ರಕ್ಷಿಸಲು ಪ್ಲೇ ಪ್ರೊಟೆಕ್ಟ್ ಫೀಚರ್ ಕಾರ್ಯನಿರ್ವಹಿಸುತ್ತದೆ. ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿರುವ ದುರುದ್ದೇಶಪೂರಿತ ಆ್ಯಪ್‌ಗಳನ್ನು ಪತ್ತೆ ಹಚ್ಚಲು ಮತ್ತು ಆ್ಯಪ್ಗಳ ಆ್ಯಕ್ಟಿವಿಟಿಯ ಮಾದರಿಗಳನ್ನೂ ಸಹ ಇದು ಟ್ರ್ಯಾಕ್ ಮಾಡುತ್ತದೆ. ಲೈವ್ ಥ್ರೆಟ್ ಡಿಟೆಕ್ಷನ್ ‘ಬಳಕೆದಾರರ ಒಪ್ಪಿಗೆಯಿಲ್ಲದೆ ಮೇಲ್ವಿಚಾರಣೆ ಉದ್ದೇಶಗಳಿಗಾಗಿ ವೈಯಕ್ತಿಕ ಅಥವಾ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸಲು ಪ್ರಯತ್ನಿಸುವ ವೈರಸ್ ಅಥವಾ ಸ್ಟಾಕರ್ವೇರ್ಗಳ ಮೇಲೆ ಗಮನ ಹರಿಸುತ್ತದೆ' ಎಂದು ಗೂಗಲ್ ತಿಳಿಸಿದೆ.
ನಿಮ್ಮ ಫೋನ್ನಲ್ಲಿ ಹಾರ್ಮ್ಫುಲ್ ಆ್ಯಪ್ ಕಂಡುಬಂದ್ರೆ ಈ ಫೀಚರ್ ಕೂಡಲೇ ನಿಮ್ಮನ್ನು ಎಚ್ಚರಿಸುತ್ತದೆ. ಆಗ ನೀವು ನಿಮ್ಮ ಡಿವೈಸ್ ಅನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆ್ಯಪಲ್ ಇಂಟೆಲಿಜೆನ್ಸ್ ಫೀಚರ್ಗಳಿಗೆ ಸಂಬಂಧಿಸಿದಂತೆ ಆ್ಯಪಲ್ನ ಗೌಪ್ಯತಾ ಕ್ರಮಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಗೂಗಲ್ನ ಲೈವ್ ಥ್ರೆಟ್ ಡಿಟೆಕ್ಷನ್ ಫೀಚರ್ ಪ್ರೈವ್ ಕಂಪ್ಯೂಟ್ ಕೋರ್ ಸಹಾಯದಿಂದ ನಿಮ್ಮ ಗೌಪ್ಯತೆಯನ್ನು ಸೆಕ್ಯೂರ್ ಮಾಡುತ್ತದೆ ಎಂದು ಗೂಗಲ್ ಹೇಳಿದೆ.
ಈ ಹಿಂದೆ ಗೂಗಲ್ ಹೊಸ ಎಐ-ಚಾಲಿತ ಸ್ಕ್ಯಾಮ್ ಡಿಟೆಕ್ಷನ್ ಫೀಚರ್ ಅನ್ನು ಹೊರತಂದಿತ್ತು. ಅದು ನಿಮ್ಮನ್ನು ಹಾನಿಗೊಳಿಸುವ ಮೊದಲು ಸ್ಕ್ಯಾಮ್ ನಿಲ್ಲಿಸುವ ಉದ್ದೇಶ ಹೊಂದಿದೆ. ಗೂಗಲ್ ಜೆಮಿನಿ ನ್ಯಾನೋನಂತೆ ಸ್ಕ್ಯಾಮ್ ಡಿಟೆಕ್ಷನ್ ರಿಯಲ್ ಟೈಂನಲ್ಲಿ ಸಂಭವಿಸಬಹುದಾದ ವಂಚನೆಯ ಬಗ್ಗೆ ಎಚ್ಚರಿಸುತ್ತದೆ. ಇದು ಎಐ ಮೂಲಕ ಕಾರ್ಯನಿರ್ವಹಿಸುತ್ತದೆ.
ಇದು ಸಂಭಾಷಣೆಯ ಮಾದರಿಗಳನ್ನು ಪತ್ತೆ ಹಚ್ಚುವ ಮೂಲಕ ಸ್ಕ್ಯಾಮ್ ನಡೆಯುತ್ತಿದೆಯೋ, ಇಲ್ಲವೋ ಎಂಬುದನ್ನು ಪತ್ತೆ ಹಚ್ಚುತ್ತದೆ. ಉದಾಹರಣೆಗೆ, ಯಾರಾದ್ರೂ ಬ್ಯಾಂಕ್ ಅಧಿಕಾರಿ ಅಥವಾ ಇನ್ನಿತರ ಅಧಿಕಾರಿಯಾಗಿ ನಿಮ್ಮನ್ನು ವಂಚನೆಯ ಬಲೆಗೆ ಕೆಡಹಲು ಅಪರಿಚಿತ ಸಂಖ್ಯೆಯಿಂದ ಕಾಲ್ ಮಾಡಿದ್ರೆ ಮತ್ತು ಕೆಲ ಕಾರಣಗಳನ್ನು ಹೇಳಿ ಕೂಡಲೇ ಹಣ ನೀಡುವಂತೆ ತಿಳಿಸಿದ್ರೆ ಈ ಫೀಚರ್ ಆ ಕಾಲ್ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತದೆ ಎಂದು ಗೂಗಲ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಲರ್ನ್ ಅಬೌಟ್: ಹೊಸ ಕಲಿಕಾ ಟೂಲ್ ಪರಿಚಯಿಸಿದ ಗೂಗಲ್