ತೇಜ್‌ಪುರ (ಅರುಣಾಚಲ ಪ್ರದೇಶ) : ಪೂರ್ವ ಕಮೆಂಗ್ ಜಿಲ್ಲೆಯ ಸೆಪಾದಲ್ಲಿ ಗುರುವಾರ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ನುಗ್ಗಿ ಅಲ್ಲಿದ್ದವರ ಮೇಲೆ ಏಕಾಏಕಿ ಮಾರಣಾಂತಿಕ ದಾಳಿ ಮಾಡಿದ ಘಟನೆ ನಡೆದಿದೆ. ಹಲ್ಲೆಯಿಂದಾಗಿ ಮೂವರು ಮೃತಪಟ್ಟು, ಆರು ಮಂದಿ ತೀವ್ರ ಗಾಯಗೊಂಡಿದ್ದಾರೆ.
ದುರಂತವೆಂದರೆ, ಮೃತರಲ್ಲಿ ದಾಳಿಕೋರನ ಪತ್ನಿ ಹಾಗೂ ಆತನ ಎರಡು ವರ್ಷದ ಮಗಳೂ ಸೇರಿದ್ದಾರೆ. ಗಾಯಗೊಂಡ ಆರು ಮಂದಿಯಲ್ಲಿ ಒಬ್ಬರು ಪೊಲೀಸ್ ಇದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿಕಮ್ ಸಾಂಗ್ಬಿಯಾ ಎಂದು ಗುರುತಿಸಲಾದ ದಾಳಿಕೋರನು ಬೆಳಗ್ಗೆ 11.30 ರ ಸುಮಾರಿಗೆ ಸೆಪಾ ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಜನರ ಮೇಲೆ ದಿಢೀರ್ ದಾಳಿ ಮಾಡಲು ಪ್ರಾರಂಭಿಸಿದ್ದಾನೆ. ಯಾವ ಕಾರಣಕ್ಕಾಗಿ ಆತ ಹಲ್ಲೆ ಮಾಡುತ್ತಿದ್ದಾನೆ ಎಂದು ಯಾರಿಗೂ ತಿಳಿದಿಲ್ಲ ಎಂದು ಪೂರ್ವ ಕಮೆಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಸಿಕೋಮ್ ಈಟಿವಿ ಭಾರತ್‌ಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಸಹೋದರಿಯ ಮೇಲೆ ಮೊದಲು ಹಲ್ಲೆ ನಡೆಸಿದ ದಾಳಿಕೋರ, ನಂತರ ಅಲ್ಲಿದ್ದ ಜನರ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದ ದಾಳಿಕೋರನ ಪತ್ನಿ ತಡೆ ಸಾಂಗ್ಬಿಯಾ, ಮಗಳು ನಾಕಿಯಾ ಸಾಂಗ್ಬಿಯಾ ಸಾವನ್ನಪ್ಪಿದ್ದಾರೆ. ಇನ್ನೊಬ್ಬರನ್ನು ಪಾಸಾ ವೆಲ್ಲಿ ಎಂದು ಗುರುತಿಸಲಾಗಿದೆ.
ಜನರ ಮೇಲೆ ದಾಳಿ ಮಾಡುತ್ತಿದ್ದ ಆರೋಪಿಯನ್ನು ತಡೆಯಲು ಯತ್ನಿಸಿದಾಗ ಪೊಲೀಸ್ ಅಧಿಕಾರಿ ಮಿನ್ಲಿ ಗೀ ಅವರ ಮೇಲೂ ಹಲ್ಲೆ ಮಾಡಿ ತೀವ್ರ ಗಾಯಗೊಳಿಸಿದ್ದಾನೆ. ಹರಿತವಾದ ವಸ್ತುಗಳಿಂದ ದಾಳಿ ಮಾಡಿದ್ದರಿಂದ ಆಸ್ಪತ್ರೆಯಲ್ಲಿ ರಕ್ತ ಚೆಲ್ಲಿದೆ. ಪೊಲೀಸ್ ಸೇರಿದಂತೆ ಎಲ್ಲ ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಟಾನಗರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂವರ ಸಾವು, ಆರು ಮಂದಿಗೆ ಗಾಯಗೊಳಿಸಿದ ನಂತರ ದಾಳಿಕೋರನನ್ನು ಪೊಲೀಸರು ಶತಪ್ರಯತ್ನ ನಡೆಸಿ ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಾವ ಕಾರಣಕ್ಕಾಗಿ ಆತ ದಾಳಿ ಮಾಡಿದ ಎಂಬುದನ್ನು ವಿಚಾರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಮದುವೆ ಮನೆಗೆ ಬಂದ ಊಹಿಸದ ಅತಿಥಿ: ಭಯದಲ್ಲಿ ಜನರು ರನ್ನಿಂಗೋ ರನ್ನಿಂಗ್!