ನವದೆಹಲಿ: ದೇಶಾದ್ಯಂತ ಮೂರು ಹೊಸ ಅಪರಾಧ ಕಾನೂನುಗಳು ಸೋಮವಾರ (ಜುಲೈ 1)ದಿಂದ ಜಾರಿಗೆ ಬರಲಿವೆ. ಈ ಕಾನೂನುಗಳು ದೇಶದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರಲಿದ್ದು, ವಸಾಹತುಶಾಹಿ ಯುಗದ ಕಾನೂನುಗಳಿಗೆ ಇತಿಶ್ರೀ ಹಾಡಲಿವೆ.
ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳ ಬದಲಿಗೆ ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಂಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಗೆ ಮುನ್ನುಡಿ ಬರೆಯಲಿವೆ.
ಶೂನ್ಯ ಎಫ್‌ಐಆರ್, ಪೊಲೀಸ್ ದೂರುಗಳ ಆನ್‌ಲೈನ್ ನೋಂದಣಿ, ಎಸ್‌ಎಂಎಸ್‌ನಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಮನ್ಸ್ ಮತ್ತು ಎಲ್ಲ ಘೋರ ಅಪರಾಧಗಳಿಗೆ ಅಪರಾಧದ ದೃಶ್ಯಗಳ ಕಡ್ಡಾಯ ವಿಡಿಯೋಗ್ರಫಿಯಂತಹ ನಿಬಂಧನೆಗಳನ್ನು ಒಳಗೊಂಡಿವೆ. ಪ್ರಸ್ತುತ ಕೆಲವು ಸಾಮಾಜಿಕ ವಾಸ್ತವತೆಗಳು ಮತ್ತು ಅಪರಾಧಗಳನ್ನು ಪರಿಹರಿಸಲು ಈ ಕಾನೂನುಗಳು ಪ್ರಯತ್ನಿಸಲಿವೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾರ್ಯವಿಧಾನವನ್ನು ಒದಗಿಸಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
45 ದಿನಗಳಲ್ಲಿ ತೀರ್ಪು: ಹೊಸ ಕಾನೂನುಗಳ ಪ್ರಕಾರ, ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳಲ್ಲಿ ತೀರ್ಪು ಬರಬೇಕು. ಮೊದಲ ವಿಚಾರಣೆಯ 60 ದಿನಗಳಲ್ಲಿ ಆರೋಪಪಟ್ಟಿ ರಚಿಸಬೇಕು. ಅತ್ಯಾಚಾರ ಸಂತ್ರಸ್ತರ ಹೇಳಿಕೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಕೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಬೇಕು ಮತ್ತು ವೈದ್ಯಕೀಯ ವರದಿಗಳು ಏಳು ದಿನಗಳಲ್ಲಿ ಬರಬೇಕು.
ದೇಶದ್ರೋಹವಲ್ಲ, ದೇಶವಿರೋಧಿ: ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದನೆಯ ಕೃತ್ಯಗಳನ್ನು ವ್ಯಾಖ್ಯಾನಿಸಲಾಗಿದೆ. ದೇಶದ್ರೋಹವನ್ನು ದೇಶವಿರೋಧಿ ಎಂದು ಬದಲಾಯಿಸಲಾಗಿದೆ. ಎಲ್ಲ ತಪಾಸಣೆ ಮತ್ತು ಜಪ್ತಿ ಕಾರ್ಯಗಳನ್ನು ವಿಡಿಯೋ ರೆಕಾರ್ಡಿಂಗ್ಅನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಕುರಿತು ಹೊಸ ಅಧ್ಯಾಯ ಸೇರಿಸಲಾಗಿದೆ. ಯಾವುದೇ ಮಗು ಖರೀದಿ ಮತ್ತು ಮಾರಾಟ ಮಾಡುವುದು ಘೋರ ಅಪರಾಧವೆಂದು ಪರಿಗಣಿಸಲಾಗಿದೆ ಮತ್ತು ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರಕ್ಕೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ.
ಈಗ ಕೇವಲ 358 ಸೆಕ್ಷನ್ಗಳು: ಭಾರತೀಯ ದಂಡ ಸಂಹಿತೆಯಲ್ಲಿನ 511 ಸೆಕ್ಷನ್ಗಳ ಬದಲಿಗೆ ಕೇವಲ 358 ಸೆಕ್ಷನ್ಗಳು ಒಳಗೊಂಡಿವೆ. ಉದಾಹರಣೆಗೆ, ಸೆಕ್ಷನ್ 6ರಿಂದ 52ರ ವರೆಗಿನ ವ್ಯಾಖ್ಯಾನಗಳನ್ನು ಒಂದು ಸೆಕ್ಷನ್ ಅಡಿಯಲ್ಲಿ ತರಲಾಗಿದೆ. 18 ಸೆಕ್ಷನ್ಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ವಿವಾಹದ ಸುಳ್ಳು ಭರವಸೆಯ ಪ್ರಕರಣಗಳು, ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರ, ಗುಂಪು ಹತ್ಯೆ, ಸರಗಳ್ಳತನ ಇತ್ಯಾದಿಗಳು ವರದಿಯಾಗುತ್ತವೆ. ಆದರೆ, ಪ್ರಸ್ತುತ ಭಾರತೀಯ ದಂಡ ಸಂಹಿತೆ ಅಂತಹ ಘಟನೆಗಳನ್ನು ಎದುರಿಸಲು ನಿರ್ದಿಷ್ಟ ನಿಬಂಧನೆಗಳನ್ನು ಹೊಂದಿಲ್ಲ. ಈಗ ಇವುಗಳನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.