ಲಖನೌ: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಡೆದ ಒಂದು ದಿನದ ನಂತರ ಅಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಭಾರಿ ಜನಜಂಗುಳಿ ನಿರ್ಮಾಣವಾಗಿದೆ. ಜನಜಂಗುಳಿಯನ್ನು ತಡೆಗಟ್ಟಲು ಅಯೋಧ್ಯೆಯತ್ತ ಬರುತ್ತಿರುವ ಬಸ್ಗಳನ್ನು ಕನಿಷ್ಠ ಎರಡು ಗಂಟೆಗಳ ಕಾಲ ತಡೆಹಿಡಿಯುವಂತೆ ಅಯೋಧ್ಯಾ ಜಿಲ್ಲಾಧಿಕಾರಿಗಳು ಸಾರಿಗೆ ಸಂಸ್ಥೆಗೆ ಸೂಚನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಂತರ ಲಖನೌ ಸೇರಿದಂತೆ ಇತರ ಜಿಲ್ಲೆಗಳಿಂದ ಅಯೋಧ್ಯೆಯತ್ತ ಬರುತ್ತಿದ್ದ ಸಾರಿಗೆ ಬಸ್ಗಳನ್ನು ತಡೆದು ನಿಲ್ಲಿಸಲಾಯಿತು.
ಅಲ್ಲದೆ ಈಗಾಗಲೇ ಅಯೋಧ್ಯೆಯಲ್ಲಿರುವ ಭಕ್ತರು ಹೊರಹೋಗಲು ಅನುಕೂಲವಾಗುವಂತೆ ಲಖನೌದಿಂದ 20 ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟಾರೆ 100 ಖಾಲಿ ಬಸ್ಗಳನ್ನು ಅಯೋಧ್ಯೆಗೆ ಕರೆಯಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಜನರಲ್ ಮ್ಯಾನೇಜರ್ ಮತ್ತು ವಕ್ತಾರ ಅಜಿತ್ ಸಿಂಗ್ ಮಾತನಾಡಿ, "ಅಯೋಧ್ಯೆಯಲ್ಲಿ ಭಾರಿ ಸಂಖ್ಯೆಯ ಭಕ್ತರು ಜಮಾಯಿಸಿದ್ದು, ಇದು ಅಲ್ಲಿನ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ. ಕನಿಷ್ಠ ಎರಡು ಗಂಟೆಗಳ ಕಾಲ ಅಯೋಧ್ಯೆಯ ಕಡೆಗೆ ತುಂಬಿದ ಬಸ್ಗಳನ್ನು ಕಳುಹಿಸದಂತೆ ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂಚಿಸಿದ್ದಾರೆ. ಇದರ ನಂತರ, ಅಯೋಧ್ಯೆಯಲ್ಲಿ ಜಮಾಯಿಸಿದ ಭಕ್ತರನ್ನು ಬೇರೆ ಸ್ಥಳಕ್ಕೆ ಕಳುಹಿಸಲು 100 ಖಾಲಿ ಬಸ್ಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ." ಎಂದು ಹೇಳಿದರು.