ನವದೆಹಲಿ:ದೆಹಲಿ ಸರ್ಕಾರವನ್ನು ಉರುಳಿಸಲು ಸಂಚು ನಡೆಸಲಾಗುತ್ತಿದೆ. ನಮ್ಮ ಪಕ್ಷದ 7 ಶಾಸಕರಿಗೆ ಬಿಜೆಪಿ 25 ಕೋಟಿ ರೂಪಾಯಿ ಆಫರ್ ನೀಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಇದನ್ನು ಕೇಸರಿ ಪಡೆ ನಿರಾಕರಿಸಿದ್ದು, ಆರೋಪ ಸಾಬೀತಿಗೆ ಸವಾಲು ಹಾಕಿದೆ.
ಎಕ್ಸ್ ಪೋಸ್ಟ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ದೆಹಲಿ ಸಿಎಂ, ಪಕ್ಷವನ್ನು ತೊರೆಯಲು ಆಪ್ನ 7 ಶಾಸಕರಿಗೆ ಬಿಜೆಪಿ ಹಣದ ಆಮಿಷ ಒಡ್ಡಿದೆ. ನಮ್ಮ ಪಕ್ಷದ ಶಾಸಕರೊಬ್ಬರನ್ನು ಬಿಜೆಪಿಯವರು ಸಂಪರ್ಕಿಸಿದ ಧ್ವನಿಮುದ್ರಿಕೆ ಲಭ್ಯವಿದೆ. ಅದನ್ನು ಮುಂಬರುವ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ 21 ಶಾಸಕರನ್ನು ಸಂಪರ್ಕಿಸಿದೆ. ಅದರಲ್ಲಿ ಏಳು ಮಂದಿಗೆ ದೊಡ್ಡ ಆಫರ್ ನೀಡಿದೆ. ಈಗಿನ ಸರ್ಕಾರ ಪತನಗೊಂಡ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಸಕರಿಗೆ ತಲಾ 25 ಕೋಟಿ ರೂಪಾಯಿ ಮತ್ತು ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಲಾಗಿದೆ. ಆದರೆ, ಇದನ್ನು ನಮ್ಮ ಶಾಸಕರು ನಿರಾಕರಿಸಿದ್ದಾರೆ ಎಂದು ಆಪ್ ನಾಯಕ ಹೇಳಿದ್ದಾರೆ.
ನನ್ನ ಬಂಧಿಸುವ ಸಾಧ್ಯತೆ:ಇದರೊಂದಿಗೆ, ಮದ್ಯ ನೀತಿ ಪ್ರಕರಣದಲ್ಲಿ ನನ್ನನ್ನು ಬಂಧಿಸುವ ಬಗ್ಗೆಯೂ ಸಂಚು ರೂಪಿಸಲಾಗುತ್ತಿದೆ. ಸರ್ಕಾರವನ್ನು ಬೀಳಿಸಿ ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆಪ್ ಸರ್ಕಾರವನ್ನು ಉರುಳಿಸಲು ಕಳೆದ 9 ವರ್ಷಗಳಿಂದ ಹಲವಾರು ಪಿತೂರಿಗಳನ್ನು ನಡೆಸಲಾಗುತ್ತಿದೆ. ಆದರೆ, ಅವೆಲ್ಲವೂ ವಿಫಲವಾಗಿವೆ. ದೇವರು ಮತ್ತು ಜನರು ಬೆಂಬಲ ನನಗಿದೆ. ವಿರೋಧಿಗಳ ಷಡ್ಯಂತ್ರ ಈ ಬಾರಿಯೂ ವಿಫಲವಾಗಲಿದೆ ಎಂದು ಟೀಕಿಸಿದ್ದಾರೆ.
ಆಪರೇಷನ್ ಕಮಲ 2.0:ದೆಹಲಿ ಸಚಿವೆ ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ಆಪರೇಷನ್ ಕಮಲ 2.0 ಪ್ರಾರಂಭಿಸಿದೆ. ಕಳೆದ ವರ್ಷವೂ ಎಎಪಿ ಶಾಸಕರಿಗೆ ಹಣದ ಆಮಿಷ ಒಡ್ಡಿ, ಸರ್ಕಾರ ಬೀಳಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದರು. ಈ ಬಾರಿಯೂ ಮತ್ತೊಮ್ಮೆ ಆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರವನ್ನು ರಚಿಸಲು ವಿಫಲವಾದ ರಾಜ್ಯಗಳಲ್ಲಿ "ಆಪರೇಷನ್ ಕಮಲ" ನಡೆಸುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿ ಆಪರೇಷನ್ ಮಾಡಿದೆ. ಈಗ ದೆಹಲಿಯಲ್ಲೂ ಪ್ರಯತ್ನಗಳು ಸಾಗಿವೆ. ಆಪ್ ಶಾಸಕರನ್ನು ಸಂಪರ್ಕಿಸಿದವರ ಪೈಕಿ ಒಬ್ಬ ಶಾಸಕರ ಬಳಿ ಆಡಿಯೋ ರೆಕಾರ್ಡ್ ಲಭ್ಯವಿದೆ. ಅದನ್ನು ಸೂಕ್ತ ಸಮಯದಲ್ಲಿ ಬಯಲು ಮಾಡಲಾಗುವುದು ಎಂದು ಸಚಿವೆ ಹೇಳಿದರು.
ಆರೋಪ ತಳ್ಳಿ ಹಾಕಿದ ಬಿಜೆಪಿ:ಇನ್ನೂ, ಬಿಜೆಪಿ ಈ ಆರೋಪವನ್ನು ನಿರಾಕರಿಸಿದೆ. ಪಕ್ಷದ ಕಾರ್ಯದರ್ಶಿ ಹರೀಶ್ ಖುರಾನಾ, ಯಾರು ಆಪ್ ಶಾಸಕರನ್ನು ಸಂಪರ್ಕಿಸಿ ನೀಡಿದ ಆಫರ್ ಬಗ್ಗೆ ಮಾಹಿತಿ ಬಹಿರಂಗ ಮಾಡಿ ಎಂದು ಸವಾಲು ಹಾಕಿದ್ದಾರೆ. ಮದ್ಯ ಹಗರಣ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಕೇಜ್ರಿವಾಲ್ ಇಂತಹ ಆರೋಪ ಮಾಡಿ, ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್, "ಇದು ಕೇಜ್ರಿವಾಲ್ ಅವರ ರಾಜಕೀಯ ಹತಾಶತನವನ್ನು ಸೂಚಿಸುತ್ತವೆ. ಆಧಾರರಹಿತ ಆರೋಪ ಮಾಡಿ ತನ್ನನ್ನು ರಾಜಕೀಯವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಆಪ್ನ ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಅಬಕಾರಿ ಹಗರಣ: ಸಿಎಂ ಅರವಿಂದ್ ಕೇಜ್ರಿವಾಲ್ಗೆ ನಾಲ್ಕನೇ ಸಲ ಇಡಿ ಸಮನ್ಸ್