ವೈರಲ್ ವಿಡಿಯೋದಲ್ಲಿ ಏನಿದೆ?: ಪ್ರಸ್ತುತ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಜನರು ಬೈಕ್ ಮತ್ತು ಕಾರುಗಳ ರ‍್ಯಾಲಿ ನಡೆಸುತ್ತಿರುವ ವಿಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.
ಈ ವಿಡಿಯೋಗೆ ಬಳಕೆದಾರನೊಬ್ಬ, ವ್ಹಾವ್, ವ್ಹಾವ್! ಇಸ್ಲಾಮಾಬಾದ್‌ನ ಜನರು ಸಂಸತ್ ಸದಸ್ಯ ಶೇರ್ ಅಫ್ಜಲ್ ಮಾರ್ವತ್ (ಉರ್ದುವಿನಿಂದ ಅನುವಾದಿಸಲಾಗಿದೆ) ನೇತೃತ್ವದಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ 11 ಸಾವಿರ ಲೈಕ್ಸ್ ಮತ್ತು 3,700 ರಿಪೋಸ್ಟ್‌ಗಳನ್ನು ಮಾಡಲಾಗಿದೆ.
ಈ ವೈರಲ್ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಎಲ್ಲರೂ, ಇಮ್ರಾನ್ ಖಾನ್ ಪರ ಹೋರಾಟ ಎಂದು ನಿರೂಪಿಸಿ ಹಂಚಿಕೊಳ್ಳುತ್ತಿದ್ದಾರೆ. ಖಾತೆಗಳಿಗೆ ಟ್ಯಾಗ್, ಅರ್ಕೈವ್ ಮಾಡಲಾಗಿದೆ.
ವೈರಲ್ ವಿಡಿಯೋದಲ್ಲಿ ಕಾಣುವುದೇನು?: ನವೆಂಬರ್ 25, 2024 ರಂದು ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ನವೆಂಬರ್ 26, 2024 ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಖಾನ್ ಅವರ ಪರ ಪ್ರತಿಭಟಿಸಿದ ನಂತರ PTI ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಇಸ್ಲಾಮಾಬಾದ್‌ಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆ ರ‍್ಯಾಲಿಯು ರಾಜಧಾನಿಯ ಹೊರವಲಯವನ್ನು ತಲುಪುತ್ತಿದ್ದಂತೆ ಸರ್ಕಾರ ಕಂಡಲ್ಲಿ ಗುಂಡು ಆದೇಶ ನೀಡಿತು. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದರಿಂದ ಐದು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
ಆದರೆ, ವಿಡಿಯೋದ ಅಸಲಿಯತ್ತು ಬೇರೆಯೇ ಇದೆ. ವೈರಲ್ ವಿಡಿಯೋ ಭಾರತದ್ದು ಮತ್ತು ಇಲ್ಲಿನ ರಾಜಕೀಯ ಪಕ್ಷವಾದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಸದಸ್ಯರಿಂದ ಆಯೋಜಿಸಲಾದ ರ‍್ಯಾಲಿ ಇದಾಗಿದೆ.
ವಾಸ್ತವ ಸತ್ಯ ಇಲ್ಲಿದೆ: ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ವೈರಲ್ ಕ್ಲಿಪ್‌ನ 24ನೇ ಸೆಕೆಂಡ್ನಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಹೊಂದಿರುವ ತ್ರಿವರ್ಣ ಧ್ವಜವನ್ನು ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಹಿಡಿದಿದ್ದಾರೆ. ಪಾಕಿಸ್ತಾನದ ಧ್ವಜವು ಹಸಿರು ಮತ್ತು ಬಿಳಿ ಬಣ್ಣದ್ದಾಗಿದೆ. ಹೀಗಾಗಿ ವಿಡಿಯೊ ಪಾಕಿಸ್ತಾನದದ್ದಲ್ಲ ಎಂದು ಸಾಬೀತಾಗುತ್ತದೆ.
ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲಿಸಿದಾಗ, ಇದೇ ವಿಡಿಯೋವನ್ನು ಔರಂಗಾಬಾದ್‌ನ AIMIM ಸದಸ್ಯರಾದ ನಾಸರ್ ಸಿದ್ದಿಕಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸೆಪ್ಟೆಂಬರ್ 24, 2024 ರಂದು ಪೋಸ್ಟ್ ಮಾಡಿದ್ದು ಪತ್ತೆಯಾಗಿದೆ. ಗುಸ್ತಖ್ ಇ ರಸೂಲ್ ಕೆ ಖಿಲಾಫ್ ಚಲೋ ಮುಂಬೈ ರ‍್ಯಾಲಿ ಎಂದು ಅವರು ಬರೆದಿದ್ದಾರೆ.
ಮುಸ್ಲಿಂ ಡೆವಲಪ್ಮೆಂಟ್ ಬೋರ್ಡ್ ಆದ ತಹ್ರೀಕ್ ಫರೋಗ್ - ಎ - ಇಸ್ಲಾಂ, ಸೆಪ್ಟೆಂಬರ್ 25, 2024 ರಂದು 'ಚಲೋ ಮುಂಬೈ' ಎಂಬ ಒಕ್ಕಣೆ ಬರೆದು ಇ ವಿಡಿಯೋದ ದೃಶ್ಯಗಳನ್ನು ತನ್ನ Instagram ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದೆ. ಈ ವಿಡಿಯೋದಲ್ಲಿನ ಕ್ಲಿಪ್‌ಗಳಲ್ಲಿ ವೈರಲ್ ಆದ ದೃಶ್ಯಗಳಿಗೆ ಸಾಮ್ಯತೆ ಇದೆ.
ಅಸಲಿ ಪ್ರತಿಭಟನೆಗೆ ಕಾರಣವೇನು?: ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಭಾರತದ ಮಹಾರಾಷ್ಟ್ರದಲ್ಲಿ ನಡೆದ ಪ್ರತಿಭಟನೆಯಾಗಿದೆ. ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿ ನಾಯಕ ನಿತೇಶ್ ರಾಣೆ ಮತ್ತು ಹಿಂದು ಧರ್ಮಗುರು ರಾಮಗಿರಿ ಮಹಾರಾಜ್ ಅವರು ನೀಡಿದ ಹೇಳಿಕೆ ವಿರುದ್ಧ ನಡೆಸಿದ ಪ್ರತಿಭಟನೆಯಾಗಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ಮುಂಬೈಗೆ ರ‍್ಯಾಲಿ ನಡೆಸಲು AIMIM ಕರೆ ನೀಡಿತ್ತು. 2024ರ ಸೆಪ್ಟೆಂಬರ್ನಲ್ಲಿ ಈ ಹೋರಾಟ ನಡೆಸಲಾಗಿದೆ. ಹಿಂದು ಗುರುವಿನ ವಿರುದ್ಧ ಸುಮಾರು 50 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಜೆಪಿಯ ನಿತೇಶ್ ರಾಣೆ ವಿರುದ್ಧವೂ ಕೇಸ್ ಹಾಕಲಾಗಿದೆ.
ಫ್ಯಾಕ್ಟ್ ಚೆಕ್ ಫಲಿತವಿದು: ಒಟ್ಟಾರೆಯಾಗಿ, ಪಾಕಿಸ್ತಾನದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಭಾರತದ್ದಾಗಿದೆ. ಇಮ್ರಾನ್ ಖಾನ್ ಪರ ನಡೆಯುತ್ತಿರುವ ರ್ಯಾಲಿ ಎಂದು ಇಲ್ಲಿನ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಫ್ಯಾಕ್ಟ್ಚೆಕ್ನಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಸಂಭಾಲ್‌ನ ಹಿಂಸಾಚಾರ ಎಂಬುದಾಗಿ ವಿಡಿಯೋ ವೈರಲ್: ಇಲ್ಲಿದೆ ಅಸಲಿ ಕಥೆ