ನವದೆಹಲಿ:ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ತನ್ನ ಬಾಕಿ ಇರುವ ಸೀಟುಗಳನ್ನು ಈ ವಾರ ಪ್ರಕಟಿಸುವ ಸಾಧ್ಯತೆಯಿದೆ. ಮಾರ್ಚ್ 21 ರಂದು ಮಹಾರಾಷ್ಟ್ರ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಬಾಕಿ ಇರುವ ಕ್ಷೇತ್ರಗಳಗೆ ಸೀಟು ಹಂಚಿಕೆ ನಡೆಯಲಿದೆ ಎಂದು ತಿಳಿದುಬಂದಿದೆ.
ಮಾರ್ಚ್ 21 ರಂದು ಶರದ್ ಪವಾರ್, ಉದ್ಧವ್ ಠಾಕ್ರೆ, ನಾನಾ ಪಟೋಲೆ, ಬಾಳಾಸಾಹೇಬ್ ಥೋರಟ್ ಸೇರಿದಂತೆ ಮೈತ್ರಿ ಪಕ್ಷಗಳ ಹಿರಿಯ ನಾಯಕರು ಸಭೆ ನಡೆಸಲಿದ್ದಾರೆ. ಕೆಲವು ಸ್ಥಾನಗಳನ್ನು ಹೊರತುಪಡಿಸಿ ಟಿಕೆಟ್ ಹಂಚಿಕೆ ಬಹುತೇಕ ಪೂರ್ಣಗೊಂಡಿದೆ ಎಂದು ಮಹಾರಾಷ್ಟ್ರದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಆಶಿಶ್ ದುವಾ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಶಿವಸೇನೆಯ ಉದ್ಧವ್ ಠಾಕ್ರೆ ಬಣ 20, ಕಾಂಗ್ರೆಸ್ 18 ಮತ್ತು ಎನ್ಸಿಪಿ ಶರದ್ ಪವಾರ್ ಅವರ ಬಣಕ್ಕೆ 10 ಸ್ಥಾನ ಸಿಗುವ ಸಾಧ್ಯತೆಯಿದೆ. ಇನ್ನು ಪ್ರಕಾಶ್ ಅಂಬೇಡ್ಕರ್ ಅವರ ’ವಂಚಿತ್ ಬಹುಜನ್ ಅಘಾಡಿ‘ ಮೈತ್ರಿಕೂಟದಲ್ಲಿ ಸೇರುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.
ಸಾಂಗ್ಲಿ, ಕೊಲ್ಹಾಪುರ, ಲಾತೂರ್, ನಾಗ್ಪುರ, ಮುಂಬೈ ನಾರ್ತ್ ಸೆಂಟ್ರಲ್, ಮುಂಬೈ ಸೌತ್ ಸೆಂಟ್ರಲ್, ಗಡ್ಚಿರೋಲಿ, ರಾಮ್‌ಟೆಕ್, ಚಂದ್ರಾಪುರ, ಅಮರಾವತಿ, ಸೊಲ್ಲಾಪುರ, ಭಿವಂಡಿ, ಪುಣೆ, ನಾಂದೇಡ್, ಧುಲೆ, ನಂದೂರ್‌ಬಾರ್, ಅಕೋಲಾ ಮತ್ತು ಭಂಡಾರ ಗೊಂಡಿಯಾ ಕಾಂಗ್ರೆಸ್‌ಗೆ ಸಿಗುವ ಸಾಧ್ಯತೆಗಳಿವೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಕಾಂಗ್ರೆಸ್‌ಗೆ ಸಾಂಗ್ಲಿ ಸ್ಥಾನ ಸಿಗಲಿದೆ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ, ಇದು ಇನ್ನು ಖಚಿತವಾಗಿಲ್ಲ. ಅಲ್ಲದೇ, ಕಾಂಗ್ರೆಸ್ ಮುಂಬೈ ಸೌತ್ ಸೆಂಟ್ರಲ್ ಸ್ಥಾನ ಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ 23, ಕಾಂಗ್ರೆಸ್ 1, ಎನ್ಸಿಪಿ 4 ಮತ್ತು ಶಿವಸೇನೆ 18 ಸ್ಥಾನಗಳನ್ನು ಗೆದ್ದಿತ್ತು.
ಬಿಹಾರದಲ್ಲಿ ಕಾಂಗ್ರೆಸ್ ಕನಿಷ್ಠ 9 ಕ್ಷೇತ್ರಗಳಲ್ಲಿ ಸ್ಫರ್ಧೆ: ಮತ್ತೊಂದೆಡೆ, 40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ, ಕಾಂಗ್ರೆಸ್ ಕನಿಷ್ಠ 9 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹೆಚ್ಚಿನ ಸ್ಥಾನಗಳು ಆರ್ಜೆಡಿಗೆ ಮತ್ತು ಉಳಿದವು ಎಡ ಪಕ್ಷಗಳಿಗೆ ಸಿಗಲಿವೆ. ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿವೆ. ಸೌಹಾರ್ದಯುತವಾಗಿ ಮಾತುಕತೆಗಳು ನಡೆಯುತ್ತಿವೆ ಎಂದು ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.