ನವದೆಹಲಿ:ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ನಡೆಸಿರುವ ಅರ್ಧಂಬರ್ಧ ವ್ಯವಸ್ಥೆ, ವಿಐಪಿ ಸಂಸ್ಕೃತಿ, ಸರಿಯಾದ ನಿರ್ವಹಣೆಯ ಹೊರತಾಗಿಯೂ ಸ್ವಯಂಪ್ರಚಾರ ನಡೆಸಿದ್ದರಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮಹಾಕುಂಭದಲ್ಲಿ ತೀರ್ಥರಾಜ್ ಸಂಗಮದ ದಡದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಅನೇಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ವರದಿ ಕೇಳಿ ಬೇಸರವಾಯಿತು. ಅಗಲಿದ ಭಕ್ತರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಹಾಗೆಯೇ ಗಾಯಾಳುಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಕಾಲ್ತುಳಿತಕ್ಕೆ ವ್ಯವಸ್ಥೆಯ ಕೊರತೆ, ವಿಐಪಿಗಳ ಹೆಚ್ಚಿನ ಆಗಮನ ಮತ್ತು ಸೂಕ್ತ ನಿರ್ವಹಣೆ ಹೊರತಾಗಿ ಸ್ವಯಂ ಪ್ರಚಾರಕ್ಕೆ ಮುಂದಾಗಿರುವುದೇ ಕಾರಣವಾಗಿದೆ. ಸಾವಿರಾರು ಕೋಟಿ ರೂ ವ್ಯಯಿಸಿದ ಬಳಿಕವೂ ಈ ರೀತಿಯ ಅವ್ಯವಸ್ಥೆಗಳನ್ನು ಸಹಿಸಲಸಾಧ್ಯ. ಮಹಾಕುಂಭದಲ್ಲಿನ ವಿಐಪಿ ಸಂಸ್ಕೃತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಪವಿತ್ರ ಸ್ನಾನಕ್ಕೆ ಇನ್ನೂ ಹಲವು ಪ್ರಮುಖ ದಿನಗಳಿವೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತು, ಭವಿಷ್ಯದಲ್ಲಿ ಇಂಥ ಅಹಿತಕರ ಘಟನೆಗಳು ಸಂಭವಿಸದಂತೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕಿದೆ. ಭಕ್ತರಿಗೆ ನೀಡುತ್ತಿರುವ ಸೌಲಭ್ಯ, ಆಹಾರ, ಪ್ರಥಮ ವೈದ್ಯಕೀಯ ಚಿಕಿತ್ಸೆಯನ್ನು ವಿಸ್ತರಿಸಬೇಕು. ಇದನ್ನೇ ಇಲ್ಲಿನ ಸಂತರು ಕೇಳುತ್ತಿರುವುದು. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಂತ್ರಸ್ತರಿಗೆ ಎಲ್ಲಾ ರೀತಿಯ ಸಾಧ್ಯವಿರುವ ಸಹಾಯವನ್ನು ನೀಡಲು ಮುಂದಾಬೇಕು ಎಂದು ಮನವಿ ಮಾಡಿದರು.