ನವದೆಹಲಿ:ಇಂದಿನಿಂದ ಜಾರಿಗೆ ಬಂದಿರುವ ಮೂರು ಹೊಸ ಕಾನೂನು ಸಂಹಿತೆಗಳನ್ನು ಇಂಡಿಯಾ ಮೈತ್ರಿಕೂಟ ಒಪ್ಪುವುದಿಲ್ಲ. ಇವನ್ನು ಸಂಸತ್ತಿನಲ್ಲಿ ವಿಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿ 'ಬಲವಂತವಾಗಿ' ಅಂಗೀಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹೊಸ ಸಂಹಿತೆಗಳು ಬುಲ್ಡೋಜರ್ ನ್ಯಾಯ ಎಂದು ಟೀಕಿಸಿರುವ ಕಾಂಗ್ರೆಸ್, ಈ ಕಾನೂನುಗಳು ಹೆಚ್ಚು ದಿನ ಅಸ್ತಿತ್ವದಲ್ಲಿ ಇರುವುದಿಲ್ಲ. ಉತ್ತಮ ಆಡಳಿತ ವ್ಯವಸ್ಥೆಗೆ ಇವು ಸರಿ ಹೊಂದುವುದಿಲ್ಲ ಎಂದು ಪಕ್ಷ ಹೇಳಿದೆ. ಈ ಮೂಲಕ ಕಾಯ್ದೆಗಳು ಜಾರಿಯಾದ ಮೊದಲ ದಿನವೇ ಅಪಸ್ವರ ಎತ್ತಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, 18ನೇ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಮತ್ತು ನೈತಿಕ ಆಘಾತ ಅನುಭವಿಸಿದ ನಂತರ, ಪ್ರಧಾನಿ ಮೋದಿ ಮತ್ತು ಬಿಜೆಪಿ ಸಂವಿಧಾನವನ್ನು ಗೌರವಿಸುವಂತೆ ನಟಿಸುತ್ತಿದ್ದಾರೆ. ಆದರೆ, ಸಂವಿಧಾನದ ಅಡಿ ಬರುವ ಈ ಕಾನೂನುಗಳನ್ನು ಸಂಸತ್ತಿನಲ್ಲಿ ವಿಪಕ್ಷಗಳ 146 ಸಂಸದರನ್ನು ಅಮಾನತು ಮಾಡಿದಾಗ ಸರ್ವರ ಒಪ್ಪಿಗೆ ಇಲ್ಲದೇ ಅಂಗೀಕರಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಸಂಸದೀಯ ವ್ಯವಸ್ಥೆಯಲ್ಲಿ ಈ ಕಾನೂನುಗಳು 'ಬುಲ್ಡೋಜರ್ ನ್ಯಾಯ'ವನ್ನು ಹೊಂದಿವೆ. ಇಂತಹ ನ್ಯಾಯ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಇಂಡಿಯಾ ಮೈತ್ರಿಕೂಟ ಒಪ್ಪುವುದಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದಾರೆ.