ಸುಲ್ತಾನ್ಪುರ (ಉತ್ತರಪ್ರದೇಶ) :2018ರ ಚುನಾವಣೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 'ಕೊಲೆಗಾರ' ಎಂದು ಟೀಕಿಸಿದ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಲ್ಲಿನ ಸುಲ್ತಾನ್ಪುರ ಸ್ಥಳೀಯ ನ್ಯಾಯಾಲಯದಲ್ಲಿ ಮಂಗಳವಾರ ಹಾಜರಾದರು. ಬಳಿಕ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಉತ್ತರಪ್ರದೇಶದಲ್ಲಿ ಸಾಗುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಗೂ ಮೊದಲು ಅವರು ಕೋರ್ಟ್ಗೆ ಖುದ್ದು ಹಾಜರಾಗಲು ಸುಲ್ತಾನ್ಪುರಕ್ಕೆ ಆಗಮಿಸಿದರು. ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರಾದ, ಬಳಿಕ ಕಾಂಗ್ರೆಸ್ ಸಂಸದನಿಗೆ ಬೇಲ್ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ:2018 ರ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬಳಸಿದ ಆಕ್ಷೇಪಾರ್ಹ ಪದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಅಂದಿನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ಮಿಶ್ರಾ ಅವರು ದೂರು ದಾಖಲಿಸಿದ್ದರು.
ರಾಹುಲ್ ಗಾಂಧಿ ಅವರು ಅಮಿತ್ ಶಾ ಅವರನ್ನು 'ಕೊಲೆಗಾರ' ಎಂದು ಆರೋಪಿಸಿದ್ದಾರೆ. ಇದು ವ್ಯಕ್ತಿಯೊಬ್ಬರನ್ನು ಕೆಟ್ಟದಾಗಿ ಬಿಂಬಿಸುವ ಪರಿಯಾಗಿದೆ. ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು ಮಾನಹಾನಿ ಮಾಡಿದ್ದಾರೆ ಎಂದು ಆಗಸ್ಟ್ 4, 2018 ರಂದು ಸುಲ್ತಾನ್‌ಪುರದ ಜಿಲ್ಲಾ ಮತ್ತು ಸತ್ರ ಸಂಸದ/ಶಾಸಕರ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕೋರ್ಟ್ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿತ್ತು. ಪ್ರಕರಣದಲ್ಲಿ ರಾಹುಲ್ ಆರೋಪಿ ಎಂದು ಸಾಬೀತಾದರೆ, ಕನಿಷ್ಠ 2 ವರ್ಷಗಳ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಯಾತ್ರೆಯ ಮೊದಲಾರ್ಧ ಮೊಟಕು:ಅಮೇಥಿಯಲ್ಲಿ ಸಾಗುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯ ಇಂದಿನ ಮೆರವಣಿಗೆಯ ಮೊದಲಾರ್ಧವನ್ನು ಮೊಟಕುಗೊಳಿಸಲಾಗಿದೆ. ರಾಹುಲ್ ಗಾಂಧಿ ಅವರು ಕೋರ್ಟ್ಗೆ ಹಾಜರಾದ ಕಾರಣ ಯಾತ್ರೆ ನಿಲ್ಲಿಸಲಾಗಿದೆ. ಬಳಿಕ ಮಧ್ಯಾಹ್ನದಿಂದ ಇಲ್ಲಿನ ಫರ್ಸತ್‌ಗಂಜ್‌ನಿಂದ ಮರು ಆರಂಭಿಸಲಾಗುವುದು ಎಂದು ಪಕ್ಷ ತಿಳಿಸಿದೆ.
ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ರಾಹುಲ್ ಗಾಂಧಿ ಕೋರ್ಟ್ಗೆ ಹಾಜರಾಗುವ ಹಿನ್ನೆಲೆಯಲ್ಲಿ ಮೊದಲಾರ್ಧದ ಯಾತ್ರೆ ಸ್ಥಗಿತಗೊಳಿಸಲಾಗಿದೆ. ಬಳಿಕ ಪುನಾರಂಭಿಸಲಾಗುವುದು ಎಂದು ಹೇಳಿದ್ದರು.
ಕಳೆದ ಮೂರು ದಿನಗಳಿಂದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಉತ್ತರಪ್ರದೇಶಲ್ಲಿ ಸಂಚರಿಸುತ್ತಿದೆ. ಸೋಮವಾರ ಅವರ ಯಾತ್ರೆ ಅವರು ಸ್ಪರ್ಧಿಸಿದ್ದ ಅಮೇಥಿಯಲ್ಲಿ ಯಾತ್ರೆ ಸಂಚರಿಸಿತ್ತು. ಈ ಮೊದಲು ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಬಳಿಕ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ.