ನವದೆಹಲಿ:I.N.D.I.A ಕೂಟದ ಮಿತ್ರಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾಡಿಕೊಂಡಿರಲಿಲ್ಲ. ಇದು ಕೈ ಪಕ್ಷಕ್ಕೆ ಭಾರಿ ಹೊಡೆತ ನೀಡಿತ್ತು. ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ರಾಜ್ಯದಲ್ಲಿ ಪಕ್ಷದ ಅಡಿಪಾಯ ಅಲುಗಾಡುತ್ತಿದ್ದು, ಬಲವರ್ಧನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮುಂದಾಗಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಮಾಜಿ ಸಂಸದ ಅಧೀರ್ ರಂಜನ್ ಚೌಧರಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ವತಃ ತಾವೇ ಸೋಲು ಕಂಡಿದ್ದರು. ಇದರಿಂದ ಪಕ್ಷಕ್ಕೆ ಭಾರೀ ಇರಿಸುಮುರುಸು ಉಂಟಾಗಿತ್ತು. ಅಧ್ಯಕ್ಷರ ಸೋಲು ಮಾತ್ರವಲ್ಲ ಸ್ಪರ್ಧಿಸಿದ್ದ 14 ಕ್ಷೇತ್ರಗಳ ಪೈಕಿ 1 ರಲ್ಲಿ ಮಾತ್ರ ಜಯ ಸಾಧಿಸಿದೆ. ರಾಜ್ಯದ ಮತದಾನದ ಪೈಕಿ ಕೇವಲ ಶೇಕಡಾ 4 ರಷ್ಟು ಮಾತ್ರ ಮತ ಪಡೆದಿದೆ. ಇದರಿಂದ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.
ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಖದರ್ನ ಮುಂದೆ ಕಾಂಗ್ರೆಸ್ ಬುಡ ಅಲುಗಾಡುತ್ತಿದೆ. ಇನ್ನೊಂದೆಡೆ ಬಿಜೆಪಿ ಟಿಎಂಸಿಗೆ ನೇರ ಟಕ್ಕರ್ ನೀಡುತ್ತಿದೆ. ಇದರ ನಡುವೆ ಕಾಂಗ್ರೆಸ್ ಬಡವಾಗಿದೆ. ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರ ಸೋತಿದ್ದರಿಂದ ಹೊಸ ಟೀಂ ಕಟ್ಟಲು ಎಐಸಿಸಿ ಚಿಂತಿಸಿದೆ. ಸಂಸತ್ತಿನಲ್ಲಿ ಪಕ್ಷವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಅಧೀರ್ ಬದಲಿಗೆ ಬೇರೆ ನಾಯಕರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ.
ಮಲ್ಲಿಕಾರ್ಜುನ್ ಖರ್ಗೆ ಅವರ ಸೂಚನೆಯ ಮೇರೆಗೆ, ಎಐಸಿಸಿ ಸಂಘಟನಾ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಜುಲೈ 29 ರಂದು ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಕಾರಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಸಭೆಯಲ್ಲಿ ಹಲವು ನಾಯಕರು ಪಕ್ಷವನ್ನು ಪುನರ್ರಚಿಸಬೇಕಿದೆ. ನಾಯಕತ್ವದ ಬದಲಾವಣೆ ಮಾಡಬೇಕಿದೆ ಎಂದು ಸೂಚಿಸಿದ್ದಾರೆ. ಅಧೀರ್ ರಂಜನ್ ಚೌಧರಿ ಅವರು ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಪಕ್ಷ ಬಲವರ್ಧನೆ ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ.