ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯು 2 ದಿನಗಳ ಬಳಿಕ ಪುನಾರಂಭವಾಗಿದೆ. ಗಣರಾಜ್ಯೋತ್ಸವ ಹಿನ್ನೆಲೆ ತಾತ್ಕಾಲಿಕ ಬ್ರೇಕ್ ನೀಡಲಾಗಿತ್ತು. ಪಶ್ಚಿಮಬಂಗಾಳದ ಜಲಪೈಗುರಿಯಿಂದ ಭಾನುವಾರ 13 ನೇ ದಿನದ ಯಾತ್ರೆ ಪುನಾರಂಭವಾಯಿತು.
ಅಸ್ಸೋಂನಲ್ಲಿ ಭಾರೀ ಗಲಾಟೆಯ ನಡುವೆ ಪಶ್ಚಿಮಬಂಗಾಳ ಪ್ರವೇಶಿಸಿರುವ ರಾಹುಲ್ ಯಾತ್ರೆಗೆ ಇಲ್ಲೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ವಿರೋಧ ಎದುರಿಸುತ್ತಿದೆ. ಇದರ ನಡುವೆಯೇ ಹಲವು ಜಿಲ್ಲೆಗಳಲ್ಲಿ ರ್ಯಾಲಿ ಸಾಗುತ್ತಿದೆ. ಗಣರಾಜ್ಯೋತ್ಸವಕ್ಕೂ ಎರಡು ದಿನ ಮುನ್ನ ಯಾತ್ರೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿತ್ತು.
ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಭಾರೀ ಬಿರುಗಾಳಿ ಎದ್ದಿರುವ ಮಧ್ಯೆಯೂ ರಾಹುಲ್ ಗಾಂಧಿ ಅವರು ಯಾತ್ರೆಯನ್ನು ಮುಂದುವರಿಸಿದ್ದಾರೆ. ಇದೇ ವೇಳೆ ರಾಷ್ಟ್ರದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟವನ್ನು ನಡೆಸುವಂತೆ ಬಂಗಾಳದ ಜನಗಳಿಗೆ ರಾಹುಲ್ ಗಾಂಧಿ ಕರೆ ನೀಡಿದರು. ಸಿಎಂ ಮಮತಾ ಬ್ಯಾನರ್ಜಿ ಅವರು, ಕಾಂಗ್ರೆಸ್ ಜೊತೆ ರಾಜ್ಯದಲ್ಲಿ ಮೈತ್ರಿ ಇಲ್ಲ ಎಂದು ಘೋಷಿಸಿದ್ದಾರೆ.
ನ್ಯಾಯಕ್ಕಾಗಿ ಜಾತಿಗಣತಿ:ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ, ದೇಶದಲ್ಲಿ ಜಾತಿಗಣತಿ ನಡೆಸುವ ಬಗ್ಗೆ ಘೋಷಿಸಿರುವ ರಾಹುಲ್ ಗಾಂಧಿ ಅದನ್ನು 'ನ್ಯಾಯದ ಮೊದಲ ಹೆಜ್ಜೆ' ಎಂದು ಬಣ್ಣಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ತೆಲಂಗಾಣ ಸರ್ಕಾರ ರಾಜ್ಯದಲ್ಲಿ ಜಾತಿಗಣತಿ ಮಾಡುವುದಾಗಿ ಘೋಷಿಸಿದೆ. ಇದು ಉತ್ತಮ ನಿರ್ಧಾರ. ನ್ಯಾಯದ ಕಡೆಗೆ ಹೆಜ್ಜೆ ಇಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮತ್ತು ಅವರ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಸಮಾಜದ ಪ್ರತಿಯೊಂದು ವರ್ಗದ ಸಮಾನ ಭಾಗವಹಿಸುವಿಕೆಯಿಂದ ಮಾತ್ರ ದೇಶದ ಏಳಿಗೆ ಸಾಧ್ಯ. ಇದನ್ನು ಸಾಕಾರ ಮಾಡಲು ಜಾತಿ ಗಣತಿಯೊಂದೇ ಮಾರ್ಗವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ ರೇವಂತ್ ರೆಡ್ಡಿ, ಚುನಾವಣೆಗೂ ಮುನ್ನ ಜನತೆಗೆ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಜಾತಿಗಣತಿಯನ್ನು ಶೀಘ್ರವೇ ರಾಜ್ಯದಲ್ಲಿ ಕೈಗೊಳ್ಳಲಿದೆ ಎಂದು ತಿಳಿಸಿದರು. ಇದೇ ವೇಳೆ ಬಿಪಿಎಲ್ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗೆ ಅವರ ಮದುವೆಯ ಸಮಯದಲ್ಲಿ 1 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯದ ಜೊತೆಗೆ 10 ಗ್ರಾಂ ಚಿನ್ನವನ್ನು ನೀಡುವ ‘ಕಲ್ಯಾಣಮಸ್ತು’ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ:'ಆಯಾ ರಾಮ್-ಗಯಾ ರಾಮ್': ನಿತೀಶ್ ಕುಮಾರ್ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ