ಕೂಚ್ ಬೆಹಾರ್ (ಪಶ್ಚಿಮ ಬಂಗಾಳ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯು ಗುರುವಾರ ಪಶ್ಚಿಮ ಬಂಗಾಳ ಪ್ರವೇಶಿಸಿದೆ. ಜನವರಿ 14ರಿಂದ ಆರಂಭವಾಗಿರುವ ಯಾತ್ರೆಯು ಅಸ್ಸೋಂ ಮೂಲಕ ಗಡಿ ಜಿಲ್ಲೆ ಕೂಚ್ ಬೆಹಾರ್ನ ಬೋಕ್ಸಿರ್‌ಹಟ್‌ಗೆ ಆಗಮಿಸಿದೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಲೋಕಸಭೆಯಲ್ಲಿ ಪಕ್ಷದ ಸಂಸದೀಯ ನಾಯಕರಾದ ಅಧೀರ್ ರಂಜನ್ ಚೌಧರಿ ಮತ್ತು ವಿವಿಧ ನಾಯಕರು ಅಸ್ಸೋಂ-ಪಶ್ಚಿಮ ಬಂಗಾಳ ಗಡಿಯ ಬೋಕ್ಸಿರ್‌ಹಾಟ್ ಜಂಕ್ಷನ್‌ನಲ್ಲಿ ರಾಹುಲ್ ಗಾಂಧಿ ಮತ್ತು ಯಾತ್ರಿಗಳನ್ನು ಬರಮಾಡಿಕೊಂಡರು. ರಾಹುಲ್ ಗಾಂಧಿ ರಾಜ್ಯಕ್ಕೆ ತಲುಪುತ್ತಿದ್ದಂತೆ ಸಂಭ್ರಮಿಸಿದ ಪಕ್ಷದ ಕಾರ್ಯಕರ್ತರು ಭೈರತಿ ನೃತ್ಯ ಪ್ರದರ್ಶಿಸಿದರು.
ಬಳಿಕ ವೇದಿಕೆಯ ಕಾರ್ಯಕ್ರಮ ಉದ್ದೇಶಿಸಿದ ಭಾಷಣ ರಾಹುಲ್ ಗಾಂಧಿ, ಇಂದು ನಾವು ಅಸ್ಸೋಂನಿಂದ ಪಶ್ಚಿಮ ಬಂಗಾಳ ತಲುಪಿದ್ದೇವೆ. ಅಸ್ಸೋಂನಲ್ಲಿ ಯಾತ್ರೆಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಕ್ಕೆ ಆ ರಾಜ್ಯದ ನಾಯಕರು ಮತ್ತು ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು. ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ, ಪಶ್ಚಿಮ ಬಂಗಾಳ ಪ್ರವೇಶಿಸಿರುವುದು ನನಗೆ ತುಂಬಾ ಸಂತಸ ತಂದಿದೆ. ನಾನು ನಿಮ್ಮ ಪರವಾಗಿ ನಿಲ್ಲಲು ಬಂದಿದ್ದೇನೆ. ನಮ್ಮನ್ನು ತುಂಬಾ ಪ್ರೀತಿಯಿಂದ ಸ್ವಾಗತಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ನಾಯಕರು ಮತ್ತು ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.
ಇದೇ ವೇಳೆ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿ, ದೇಶದ ಜನತೆಗೆ ಬಿಜೆಪಿ - ಆರ್‌ಎಸ್‌ಎಸ್ ಅನ್ಯಾಯ ಮಾಡುತ್ತಿದೆ. ಜೊತೆಗೆ ದ್ವೇಷ ಮತ್ತು ಹಿಂಸೆ ಹರಡುತ್ತಿದೆ. ಇದಕ್ಕಾಗಿ, ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಡಲು ಕಾಂಗ್ರೆಸ್ ಭಾರತ್ ಜೋಡೋ ನ್ಯಾಯ ಯಾತ್ರೆ ಪ್ರಾರಂಭಿಸಿದೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುವ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.