ಚಾಮರಾಜನಗರ : ಕಷ್ಟಕ್ಕೆಂದು ಕಿರುಸಾಲ ಪಡೆದ ಹಣವೇ ತಮಗೆ ಮುಳುವಾಗಿದ್ದು, ಊರು ಬಿಟ್ಟು- ಮಕ್ಕಳನ್ನು ತೊರೆದು ಕಣ್ಮರೆ ಆಗುತ್ತಿರುವ ಪ್ರಕರಣಗಳು ಗಡಿಜಿಲ್ಲೆ ಚಾಮರಾಜನಗರದಲ್ಲಿ ಹೆಚ್ಚಾಗುತ್ತಿವೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಾಲಕನೊಬ್ಬ ಕಣ್ಣೀರು ಹಾಕಿದ್ದಾನೆ. ಈ ಕುರಿತ ರಿಪೋರ್ಟ್ ಇಲ್ಲಿದೆ.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ, ದೇಶವಳ್ಳಿ ಸೇರಿ ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆ ಪೋಷಕರು ಕರೆದೊಯ್ದಿದ್ದಾರೆ. ಮನೆ ಖರ್ಚು ವೆಚ್ಚಗಳಿಗೆ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಇಲ್ಲಿನ ಕುಟುಂಬಗಳು ಸಾಲ ಪಡೆದಿವೆ. ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮನೆಯನ್ನೇ ತೊರೆಯುತ್ತಿದ್ದಾರೆ.
ಈ ಬಗ್ಗೆ ಮೋಹನ್ ಎಂಬ ಬಾಲಕ ಮಾತನಾಡಿ, ''ಬಾಯಿಗೆ ಬಂದಂತೆ ಬಯ್ತಾರೆ, ರಾತ್ರಿ ವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಬಯ್ತಾರೆ. ಕಿರುಕುಳ ಕೊಡ್ತಾರೆ. ಕೈ ಮುಗಿದು ಕೇಳಿಕೊಳ್ತಿನಿ, ನನ್ನ ಒಂದು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ. ಕಿಡ್ನಿ ಮಾರಿ ಅಪ್ಪ- ಅಮ್ಮನ ಸಾಲ ತೀರಿಸಿ ಹೆಂಗೋ ಬದುಕಿಕೊಂಡು ಹೋಗುತ್ತೇವೆ'' ಎಂದು ಕಣ್ಣೀರಿಟ್ಟಿದ್ದಾನೆ.
ಈ ಬಗ್ಗೆ ರೈತ ಮುಖಂಡ ಮಹೇಶ್ ಕುಮಾರ್ ಮಾತನಾಡಿ, ''ಮೈಕ್ರೋಫೈನಾನ್ಸ್ ಕಂಪನಿಗಳು ಸಾಲ ಕೊಟ್ಟು ಶೂಲಕ್ಕೆ ಏರಿಸುತ್ತಿದ್ದಾರೆ. ಕೊಡುವಾಗ ನಯವಾಗಿ ಮಾತನಾಡಿ ಸಾಲವನ್ನ ಕೊಡುತ್ತಾರೆ, ನಂತರ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಗಲಾಟೆ ಮಾಡುತ್ತಾರೆ. ನೂರಾರು ಕುಟುಂಬಗಳು ಮನೆಯನ್ನ ತೊರೆದಿವೆ. ಅವರೆಲ್ಲಾ ಎಲ್ಲಿದ್ದಾರೆ ಎಂಬುದರ ಕುರಿತು ಸರಿಯಾದ ಮಾಹಿತಿ ಇಲ್ಲ'' ಎಂದರು.
ಖಾಸಗಿ ಫೈನಾನ್ಸ್ ಕಿರುಕುಳದಿಂದ ಜನರು ಊರುಗಳನ್ನೇ ತೊರೆಯುತ್ತಿದ್ದಾರೆಂದು ರೈತ ಮುಖಂಡರು ಸಚಿವ ಕೆ. ವೆಂಕಟೇಶ್ ಮುಂದೆಯೂ ಕಳೆದ ಮಂಗಳವಾರ ಅಳಲು ತೋಡಿಕೊಂಡಿದ್ದರು. ಖಾಸಗಿ ಪೈನಾನ್ಸ್ ಕಿರುಕುಳ ಹೆಚ್ಚಾಗುತ್ತಿದ್ದು, ಮಕ್ಕಳ ಶಿಕ್ಷಣ ಮೊಟಕುಗೊಳಿಸಿ ಊರು ತೊರೆಯುತ್ತಿದ್ದಾರೆ. ಪೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಿ ಎಂದು ಒತ್ತಾಯಿಸಿದ್ದರು.
ಅದಕ್ಕೆ ಡಿಸಿ ಮತ್ತು ಎಸ್ಪಿಗೆ ಹೆಚ್ಚು ಅಧಿಕಾರ ಕೊಟ್ಟು ಸಮಸ್ಯೆ ಬಗೆಹರಿಸುವತ್ತ ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ಕೊಟ್ಟಿದ್ದು, ಇನ್ನಾದರೂ ಖಾಸಗಿ ಫೈನಾನ್ಸ್ಗಳಿಗೆ ಬಿಸಿ ಮುಟ್ಟಿಸುತ್ತಾರಾ ಎಂಬುದನ್ನ ಕಾದು ನೋಡಬೇಕು.
ಇದನ್ನೂ ಓದಿ : ಕಾರವಾರ:ಉದ್ಯಮಿ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಐವರು ಆರೋಪಿಗಳು ಅರೆಸ್ಟ್ - FIVE ARRESTED IN KIDNAP CASE